ಕಲಬುರಗಿ | 59 ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಮನವಿ
ಕಲಬುರಗಿ : 59 ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
101 ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಲು ಆಗ್ರಹಿಸಿ ರಾಜ್ಯದಲ್ಲಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸಲಾಯಿತು. ಈ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ 7 ಜನ ನ್ಯಾಯಾಧೀಶರ ಪೀಠ 2024ರ ಆಗಸ್ಟ್ 1 ರಂದು ಐತಿಹಾಸಿಕ ತೀರ್ಪು ನೀಡಿತು. ಈ ತೀರ್ಪನ್ನು ಆಧರಿಸಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯನ್ನು ಪರಿಷ್ಕರಿಸಿ ರಾಜ್ಯ ಸರ್ಕಾರದ "ಸಚಿವ ಸಂಪುಟ" ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.6 ಮತ್ತು ಬೋವಿ, ಕೊರಮ, ಕೊರಚ, ಲಮಾಣಿ ಹಾಗೂ 59 ಅಲೆಮಾರಿ ಜಾತಿಗಳಿಗೆ ಶೇ.5 ಮೀಸಲಾತಿ ಕಲ್ಪಿಸಿ 3 ಗುಂಪುಗಳನ್ನಾಗಿಸಿ ವರ್ಗೀಕರಿಸಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ 59 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳು ಪ್ರವರ್ಗ-ಎ, ಶೇ.1ರಷ್ಟು, ಪ್ರವರ್ಗ-ಸಿ, ಮಾದಿಗ ಮತ್ತು ಮಾದಿಗ ಸಂಬಂಧಿತ 18 ಪ್ರವರ್ಗ-ಬಿ, ಜಾತಿಗಳಿಗೆ ಶೇ.6, ಹೊಲೆಯ ಮತ್ತು ಹೊಲೆಯ ಸಂಬಂಧಿತ 17 ಜಾತಿಗಳಿಗೆ ಶೇ. 5, ಮತ್ತು ಬೋವಿ, ಕೊರಮ, ಕೊರಚ, ಲಮಾಣಿ ಜಾತಿಗಳಿಗೆ ಶೇ 4. ಹಾಗೂ ಎ.ಕೆ., ಎ.ಡಿ., ಮತ್ತು ಎಎ ಜಾತಿಗಳಿಗೆ ಶೇ. 1 ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿತು. ನಾಗಮೋಹನ್ ದಾಸ್ ವರದಿಯು ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಪ್ರೇರಕವಾಗಿತ್ತು. ಆದರೆ ಈ ವರದಿಯನ್ನು ಸರ್ಕಾರ ಕಡೆಗಣಿಸಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್. ಬೀಜನಳ್ಳಿಕರ್, ವಿಭಾಗಿ ಕಾರ್ಯಧ್ಯಕ್ಷ ಹಂಪಣ್ಣ ಹುಳಾಗಡ್ಡಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಕಾಂತ ಡಿ ಕೋಲಕುಂದಾ, ತಾಲೂಕ ಉಪಾಧ್ಯಕ್ಷ ನರಸಪ್ಪ ಕಾಮರಡಗಿ, ಮಲ್ಲಿಕಾರ್ಜುನ ತಾರಫೈಲ್, ಬಸವರಾಜ ಬಿಲಗುಂದಿ, ಆಂಜನೇಯ ಆಲೂರ ಮತ್ತಿತರರು ಇದ್ದರು.