Kalaburagi | ರಟಕಲ್ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆ ಆರೋಪ : ಪಂಚಾಯತ್ ಅಧಿಕಾರಿಯನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು
ಕಲಬುರಗಿ : ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂದಲು ಮಿಶ್ರಿತ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗ್ರಾಮಸ್ಥರು ಪಂಚಾಯತಿ ಮೂಲಕ ಸರಬರಾಜಾಗುವ ನೀರಿನ ಮೇಲೆ ಅವಲಂಬಿತರಾಗಿದ್ದು, ಕಳೆದ ಕೆಲವು ದಿನಗಳಿಂದ ಕೂದಲು ಮಿಶ್ರಿತ ಕಲುಷಿತ ನೀರು ಬರುತ್ತಿದೆ ಎಂದು ದೂರಿದರು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
ನೀರಿನ ಶೇಖರಣಾ ಟ್ಯಾಂಕ್ ಶುದ್ಧೀಕರಿಸದೆ ನೇರವಾಗಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುವ ಭೀತಿ ಇದೆ ಎಂದು ಗ್ರಾಮಸ್ಥರು ಹೇಳಿದರು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಕ್ಷಣವೇ ನೀರಿನ ಟ್ಯಾಂಕ್ ಶುದ್ಧೀಕರಿಸಿ, ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸಪ್ಪ, ವಿನೋದ ಸಿಗಿ, ನಾಗೇಶ್ ಸಿಗಿ, ಸಾದಿಕ್ ಅಲಿ ಬುದ್ಲಿ, ಜಗ್ಗು ಮಾಳಪ್ಪ, ನಸೀರ್ ಕಟ್ಟೋಲಿ, ಆಸೀಫ್ ಬುದ್ಲಿ ಸೇರಿದಂತೆ ಗ್ರಾಮದ ಮಹಿಳೆಯರು ಮತ್ತು ಯುವಜನರು ಉಪಸ್ಥಿತರಿದ್ದರು.