×
Ad

Kalaburagi | ತಳವಾರ ಸಮುದಾಯಕ್ಕೆ ಎಸ್.ಟಿ. ಜಾತಿ ಪ್ರಮಾಣ ಪತ್ರ ವಿತರಣೆಗೆ ಒತ್ತಾಯಿಸಿ ಮನವಿ

Update: 2026-05-22 22:10 IST

ಕಲಬುರಗಿ : ತಳವಾರ ಸಮುದಾಯದ ಅರ್ಹ ಜನರಿಗೆ ಪರಿಶಿಷ್ಟ ಪಂಗಡ (ಎಸ್.ಟಿ.) ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಸಂತೋಷ ತಳವಾರ, ತಳವಾರ ಜಾತಿಗೆ ಸೇರಿದವರ ಶಾಲಾ ದಾಖಲಾತಿ, ಗ್ರಾಮ ಲೆಕ್ಕಿಗ ಹಾಗೂ ಕಂದಾಯ ಅಧಿಕಾರಿಗಳ ಪಂಚನಾಮೆ ವರದಿಗಳಲ್ಲಿ ತಳವಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದ್ದರೂ, ಅಫಜಲಪುರ ತಾಲೂಕಿನಲ್ಲಿ ಹಲವರಿಗೆ ಇನ್ನೂ ಎಸ್.ಟಿ. ಜಾತಿ ಪ್ರಮಾಣ ಪತ್ರಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಮೇ 7ರಂದು ಜಿಲ್ಲೆಯ ಎಲ್ಲಾ ಗ್ರೇಡ್-2 ತಹಶೀಲ್ದಾರರಿಗೆ ತಳವಾರ ಸಮುದಾಯದವರಿಗೆ ಎಸ್.ಟಿ. ಜಾತಿ ಪ್ರಮಾಣ ಪತ್ರ ವಿತರಿಸುವ ಕುರಿತು ನಿರ್ದೇಶನ ನೀಡಿದ್ದರೂ, ಅಫಜಲಪುರ ತಾಲೂಕಿನಲ್ಲಿ ಅದರ ಅನುಷ್ಠಾನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಹಲವು ಬಾರಿ ಹೋರಾಟ ಹಾಗೂ ಮನವಿಗಳನ್ನು ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ತಳವಾರ ಸಮುದಾಯದ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಸರ್ಕಾರದ ಆದೇಶ ಹಾಗೂ ಕಾನೂನು ನಿಯಮಗಳ ಪ್ರಕಾರ ಅರ್ಹರಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದೇಸಾಯಿ ಕಲ್ಲೂರ್, ರಾಮು ಉಮರ್ಗಿ, ಬೋಗೆಶ್ ಜಮಾದಾರ್, ಗುರುನಾಥ್ ಹಾವನೂರ್ ಮತ್ತಿತ್ತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News