×
Ad

Kalaburagi | ವಿವಿಧ ಬೇಡಿಕೆಗಳ ಈಡೇರಿಕೆಗೆ ಎಸ್‌ಬಿಐ ನೌಕರರಿಂದ ಕ್ಯಾಂಡಲ್ ಮಾರ್ಚ್

ಮೇ 25 ಮತ್ತು 26ರಂದು ಮುಷ್ಕರಕ್ಕೆ ಕರೆ

Update: 2026-05-22 22:02 IST

ಕಲಬುರಗಿ : ಮೆಸೆಂಜರ್‌ಗಳು ಹಾಗೂ ಶಸ್ತ್ರಸಜ್ಜಿತ ರಕ್ಷಕರ ತಕ್ಷಣದ ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ (AISBISF) ವತಿಯಿಂದ ಶುಕ್ರವಾರ ಸಂಜೆ ನಗರದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.

ನಗರದ ಸ್ಪೇಷನ್ ಬಜಾರ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮೋಹನ್ ಲಾಡ್ಜ್ ಮುಖಾಂತರ ತಿಮ್ಮಾಪುರಿ ಚೌಕ್‌ವರೆಗೆ ಸಾಗಿತು.

ಬ್ಯಾಂಕ್ ನೌಕರರ ದೀರ್ಘಕಾಲದ ಬೇಡಿಕೆಗಳ ಕುರಿತು ಆಡಳಿತ ಮಂಡಳಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಸಂಘಟನೆಯ ಉಪ ಪ್ರಧಾನ ಕಾರ್ಯದರ್ಶಿ ನವೀನ್ ಕಾಗಲ್ಕರ್, ಹಲವು ವರ್ಷಗಳಿಂದ ಎಸ್‌ಬಿಐ ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಿದರೂ ಬೇಡಿಕೆಗಳಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮೇ 25 ಮತ್ತು 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಮೆಸೆಂಜರ್‌ಗಳು ಮತ್ತು ಶಸ್ತ್ರಸಜ್ಜಿತ ರಕ್ಷಕರ ತಕ್ಷಣದ ನೇಮಕಾತಿ, 2019ರಿಂದ ಸೇವೆಗೆ ಸೇರಿದ ನೌಕರರಿಗೆ ಐಸಿಟಿ ವರ್ಗಾವಣೆ ಜಾರಿ, ಶಾಶ್ವತ ಹುದ್ದೆಗಳ ಔಟ್‌ಸೋರ್ಸಿಂಗ್ ನಿಲ್ಲಿಸುವುದು, ವೇತನ ಸಮಾನತೆ ಸಮಸ್ಯೆ ಪರಿಹಾರ, ಎನ್‌ಪಿಎಸ್ ವ್ಯಾಪ್ತಿಯ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆ ಅವಕಾಶ, ಸಮರ್ಪಕ ಸಿಬ್ಬಂದಿ ನೇಮಕಾತಿ ಹಾಗೂ ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಸ್ಟಾಫ್ ಯೂನಿಯನ್ (ಕರ್ನಾಟಕ) ಸಹಾಯಕ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ಜೋಶಿ, ರಾಘವೇಂದ್ರ ಕುಲಕರ್ಣಿ, ರೀಟಾ ರಾಥೋಡ್, ಮಲ್ಲರಾವ್ ಕುಲಕರ್ಣಿ, ವೀಣಾರಾಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News