×
Ad

Kalaburagi | ಸೈಬರ್‌ ಭದ್ರತೆ ಆಧುನಿಕ ಜಗತ್ತಿನ ದೊಡ್ಡ ಸವಾಲು : ಡಿಸಿಪಿ ಶಾಲೂ

ತಾಂತ್ರಿಕ–ಸಾಂಸ್ಕೃತಿಕ ಉತ್ಸವ ‘ನಿರ್ಮಾಣ–2026’

Update: 2026-05-22 22:13 IST

ಕಲಬುರಗಿ : ಸೈಬರ್ ಭದ್ರತೆ ಆಧುನಿಕ ಜಗತ್ತಿನ ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂದು ಡಿಸಿಪಿ ಶಾಲೂ ಹೇಳಿದರು.

ನಗರದ ಪಿಡಿಎ ಸ್ಯಾಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ತಾಂತ್ರಿಕ–ಸಾಂಸ್ಕೃತಿಕ ಉತ್ಸವ ‘ನಿರ್ಮಾಣ–2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಒಟಿಪಿ, ಎಪಿಕೆ ಫೈಲ್, ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ರೀತಿಯ ಸೈಬರ್ ವಂಚನೆಗಳು ಹೆಚ್ಚುತ್ತಿವೆ. ವಿಪರ್ಯಾಸವೆಂದರೆ ವಿದ್ಯಾವಂತರೇ ಇಂತಹ ಮೋಸಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ತಂತ್ರಜ್ಞಾನ ಯುಗದಲ್ಲಿ ಯಶಸ್ಸು ಸಾಧಿಸಲು ನಾವೀನ್ಯತೆ ಹಾಗೂ ಸೃಜನಶೀಲತೆಯೊಂದಿಗೆ ಕೆಲಸ ಮಾಡಬೇಕು. ಇಲ್ಲದಿದ್ದರೆ ವಿಫಲತೆ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಇನ್‌ಫಿನಾನ್ ಟೆಕ್ನಾಲಜಿಸ್ ಕಂಪನಿಯ ಹಿರಿಯ ನಿರ್ದೇಶಕ ಪ್ರಕಾಶ ಬಾಲಸುಬ್ರಮಣ್ಯಂ ಮಾತನಾಡಿ, ಎಂಜಿನಿಯರಿಂಗ್ ಕ್ಷೇತ್ರದ ಎಲ್ಲ ವಿಭಾಗಗಳೂ ಪರಸ್ಪರ ಪೂರಕವಾಗಿದ್ದು, ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿದರು. ಪಿಡಿಎ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಎಸ್‌.ಆರ್‌. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ನಿರ್ಮಾಣ–2026’ ಸಂಯೋಜಕ ಪ್ರೊ. ಜಯಪ್ರಕಾಶ ಎ.ಕೆ. ಎರಡು ದಿನಗಳ ತಾಂತ್ರಿಕ–ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಡಾ.ಶರಣಬಸಪ್ಪ ಹರವಾಳ, ಡಾ.ಅನಿಲಕುಮಾರ ಪಟ್ಟಣ, ಡಾ.ಕಿರಣ ದೇಶಮುಖ, ಡಾ.ಮಹಾದೇವಪ್ಪ ರಾಂಪುರೆ, ಸಾಯಿನಾಥ ಪಾಟೀಲ, ನಾಗಣ್ಣ ಘಂಟಿ, ಪಿಡಿಎ ಎಂಜಿನಿಯರಿಂಗ್‌ ಕಾಲೇಜು ಉಪ ಪ್ರಾಚಾರ್ಯರಾದ ಎಸ್‌.ಆರ್‌.ಹೊಟ್ಟಿ, ಭಾರತಿ ಹರಸೂರ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News