Kalaburagi | ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ : ಸಿದ್ರಾಮಪ್ಪ ಧಂಗಾಪೂರ
ಕಲಬುರಗಿ : ಮುಂಗಾರು ಆಗಮನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ ಸೂಚಿಸಿದರು.
ಶುಕ್ರವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ರೈತರಿಗೆ ಸುಲಭವಾಗಿ ಬೀಜ ಮತ್ತು ರಸಗೊಬ್ಬರ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ದಾಸ್ತಾನು ಮಾಡಿ ಸಮರ್ಪಕ ಪೂರೈಕೆಗೆ ಕೃಷಿ ಇಲಾಖೆಯ ಎಲ್ಲಾ ಸಹಾಯಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಮುಂಗಾರು ಹಂಗಾಮಿನ ಮಳೆಯ ವಿವರ, ಬಿತ್ತನೆ ಬೀಜದ ಲಭ್ಯತೆ ಹಾಗೂ ರಸಗೊಬ್ಬರದ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ.99.67 ಅಂಕ ಗಳಿಸಿದ ವಿದ್ಯಾರ್ಥಿನಿ ಸೃಷ್ಠಿ ಮಲ್ಲಿನಾಥ ಪಾಟೀಲ್ ಅವರಿಗೆ ಕೃಷಿಕ ಸಮಾಜದ ವತಿಯಿಂದ 10 ಸಾವಿರ ರೂ. ಪ್ರೋತ್ಸಾಹಧನ ನೀಡಿ ಸತ್ಕರಿಸಲಾಯಿತು.
ಸಭೆಯಲ್ಲಿ ರಾಜ್ಯ ಪ್ರತಿನಿಧಿಗಳಾದ ಕೇದಾರಲಿಂಗಯ್ಯ ಹಿರೇಮಠ, ಬಸವರಾಜ ರುದ್ರಪ್ಪ ಪಾಟೀಲ, ಕೃಷಿಕ ಸಮಾಜದ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ತಾಲೂಕುಗಳ ಕೃಷಿಕ ಸಮಾಜದ ಅಧ್ಯಕ್ಷರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.