×
Ad

ಕಲಬುರಗಿ | ವರದಿಗಾರರ ಮೇಲೆ ಹಲ್ಲೆಗೆ ಯತ್ನ ; ಕ್ಷಮೆ ಯಾಚಿಸಿದ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಪೂಜಾರಿ

Update: 2025-01-31 15:49 IST

ಕಲಬುರಗಿ : ನಗರದ ಜಗತ್ ವೃತ್ತದಲ್ಲಿ ಗುರುವಾರ ಕುರುಬ ಸಮಾಜದಿಂದ ನಡೆದ ಪ್ರತಿಭಟನೆಯಲ್ಲಿ ಮೂವರು ವರದಿಗಾರರ ಮೇಲೆ ಹಲ್ಲೆಗೆ ಯತ್ನಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಪೂಜಾರಿ ಕ್ಷಮೆ ಯಾಚಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ನನ್ನ ಬೆಳವಣಿಗೆಗೆ ಕಾರಣಕರ್ತರಾದ ಪತ್ರಕರ್ತರ ಮೇಲೆ ತಮ್ಮದೇ ಸಮುದಾಯದ ಕೆಲ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿರುವುದು ತುಂಬಾ ದುಃಖವಾಗಿದೆ, ನಮ್ಮ ಹುಡುಗರು ತಪ್ಪು ಮತ್ತು ಒಳ್ಳೆಯದು ಮಾಡಿದ್ದರೂ ನಾನೇ ಮಾಡಿದಂತಾಗುತ್ತದೆ, ದಸ್ತಗೀರ, ಚಂದ್ರು ಅವರಿಬ್ಬರಿಗೆ ಮಾತ್ರ ಅಲ್ಲದೆ ಎಲ್ಲ ಪತ್ರಕರ್ತ ಮಿತ್ರರಿಗೂ ಸಂಘದ ಪರವಾಗಿ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.

ರಾಜಕೀಯವಾಗಿ ನಾನು ಬೆಳೆಯಲು ಪತ್ರಕರ್ತರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು ನಮ್ಮ ಸುದ್ದಿ ಮಾಡಿದ್ದೀರಿ, ಇಂತಹ ಪತ್ರಕರ್ತರಿಗೆ ಅಗೌರವ ಆಗಿರುವುದು ತುಂಬಾ ನೋವಿನ ಸಂಗತಿ, ನನ್ನ ಕಡೆಯಿಂದ ತಪ್ಪಾಗಿದೆ, ಅದಕ್ಕಾಗಿಯೇ ನಾನು ಗುರುವಾರ ಸಂಜೆಯೇ ಹಿರಿಯ ಪತ್ರಕರ್ತರಿಗೆ, ನೋವಿಗೆ ಒಳಗಾದ ಮಾಧ್ಯಮ ಮಿತ್ರರಿಗೆ ಕರೆ ಮಾಡಿ ಕ್ಷಮೆ ಕೋರುವುದಾಗಿ ಹೇಳಿದ್ದೇನೆ, ಮುಂದೆ ಹೀಗೆ ಆಗದಂತೆ ಮುಂಜಾಗ್ರತಾ ವಹಿಸುವುದಾಗಿ ಹೇಳಿದರು.

ಘಟನೆಯ ವಿವರ :

ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿನ ಮಾಳಿಂಗರಾಯ ದೇವಸ್ಥಾನದ ಪೂಜೆಗೆ ಕುರುಬ ಸಮಾಜದ ಪೂಜಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕೆಲವರು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.

ಅದರ ಕುರಿತಾದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. 'ವಾರ್ತಾ ಭಾರತಿ' ಪತ್ರಿಕೆಯ ಸುದ್ದಿ ಪ್ರಕಟಿಸಿರುವ ಬೆನ್ನಲ್ಲೇ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಪೂಜಾರಿ ಅವರು ರಾತ್ರೋ ರಾತ್ರಿ ಕ್ಷಮೆಯಾಚಿಸಿದ್ದಾರೆ. ಉಳಿದ ಪತ್ರಕರ್ತರಿಗೆ ಪ್ರತಿಭಟನೆಯ ಕುರಿತಾದ ಋಣಾತ್ಮಕ ಸುದ್ದಿಯನ್ನು ದಯವಿಟ್ಟು ಬರೆಯಬೇಡಿ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಬೆಳಗ್ಗೆ ಪತ್ರಿಕಾ ಭವನಕ್ಕೆ ಬಂದು ಎಲ್ಲ ಪತ್ರಕರ್ತರ ಎದುರಿಗೂ ಕ್ಷಮಿಸಿ ಎಂದು ಕೋರಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News