×
Ad

ಕಲಬುರಗಿ| ರೈತರಿಗೆ ಸಮರ್ಪಕವಾಗಿ ಪರಿಹಾರ ಒದಗಿಸಲು ಎಐಕೆಕೆಎಮ್‌ಎಸ್ ಆಗ್ರಹ

Update: 2025-12-04 22:51 IST

ಕಲಬುರಗಿ: ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಸಮರ್ಪಕವಾಗಿ ಪರಿಹಾರ ಬಂದಿಲ್ಲ.ಕೆಲವು ರೈತರಿಗೆ ಕಡಿಮೆ ಪರಿಹಾರ ಬಂದಿದೆ.ಕೂಡಲೇ ರೈತರಿಗೆ ಸರಿಯಾದ ಪರಿಹಾರ ಒದಗಿಸಬೇಕು ಮತ್ತು ತೊಗರಿ ಕೇಂದ್ರಗಳನ್ನು ತೆರೆಯುವುದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಕಾ. ಗಣಪತರಾವ ಕೆ. ಮಾನೆ ಆಗ್ರಹಿಸಿದರು.

ಬುಧವಾರ ಶಹಾಬಾದ ನಗರದ ತಹಶೀಲ್ದಾರ್‌ ಕಚೇರಿಯ ಮುಂದೆ ನೆರೆ ಹಾವಳಿಯಿಂದ ಸಂಕಷ್ಟದಲ್ಲಿರುವ ಎಲ್ಲಾ ರೈತರಿಗೂ ಬೆಳೆ ನಷ್ಟ ಸಮರ್ಪಕ ಪರಿಹಾರಕ್ಕಾಗಿ ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆಯ ತಾಲೂಕು ಸಮಿತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದಲ್ಲಿ ಬಂಡವಾಳಶಾಹಿ ಪರ ನಿಂತು ರೈತರ ಬದುಕಿಗೆ ಪ್ರಹಾರ ಮಾಡುವಂತಹ ನೀತಿಗಳನ್ನು ಒಂದರ ನಂತರ ಮತ್ತೊಂದು ಜಾರಿ ಮಾಡುತ್ತಿರುವುದರಿಂದ ನಮ್ಮ ರೈತರು ನಿರ್ಗತಿಕರಾಗುತ್ತಿದ್ದಾರೆ. ಅಂಬಾನಿ-ಆದಾನಿಗಳoತಹ ಬಂಡವಾಳಶಾಹಿಗಳ ಸೇವೆಯಲ್ಲಿರುವ ಈ ಸರಕಾರಗಳ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ಬೆಳಸಬೇಕಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾದ ತೊಗರಿ ಬೆಳೆಯು ಅತಿಯಾದ ಮಳೆಯಿಂದ ನಷ್ಟವಾಗಿ ರೈತರ ಬದುಕು ಬೀದಿಗೆ ಬಂದoತಾಗಿದೆ. ಮುಂಗಾರು ಬಿತ್ತನೆಯು ಎರಡು, ಮೂರು ಬಾರಿ ಮಾಡಿದರೂ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಸರಕಾರವು ವಿತರಿಸಿದ ಪರಿಹಾರ ಅವೈಜ್ಞಾನಿಕ ಹಾಗೂ ಸಮರ್ಪಕವಾಗಿಲ್ಲ. ಕೆಲ ರೈತರಿಗೆ ಅತ್ಯಂತ ಕಡಿಮೆ ಹಣ ಜಮಾ ಆಗಿರುವುದು ಹಾಗೂ ಕೆಲವು ರೈತರಿಗೆ ಹಣ ಜಮಾ ಆಗದೇ ಇರುವುದು ಕಂಡುಬoದಿದೆ. ಇದನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೆವೆ. ಈ ಕೂಡಲೇ ಕಷ್ಟದಲ್ಲಿರುವ ರೈತರಿಗೆ ಸಮರ್ಪಕ ಪರಿಹಾರಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.

ಎಐಕೆಕೆಎಮ್‌ಎಸ್ ಜಿಲ್ಲಾ ನಾಯಕರಾದ ಕಾ. ಭಾಗಣ್ಣ ಬುಕ್ಕ ಮಾತನಾಡಿ, ನೆರೆ ಹಾವಳಿಯಿಂದಾಗಿ ಹಲವಾರು ಹಳ್ಳಿಗಳು ನೀರಿನಲ್ಲಿ ಮುಳುಗಿರುವ ವಿಷಯ ಸರಕಾರಕ್ಕೆ ಗೊತ್ತಿದ್ದರೂ ಇಲ್ಲಿಯವರೆಗೆ ಶಾಶ್ವತ ಪರಿಹಾರದ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕೂಡಲೇ ಶಾಶ್ವತ ವಸತಿ ಯೋಜನೆಯನ್ನು ರೂಪಿಸಿ ಅವರಿಗೆ ಶಾಶ್ವತ ಮನೆಗಳನ್ನು ಕಟ್ಟಿಕೊಡಬೇಕೆಂದು ಆಗ್ರಹಿಸಿದರು.

ಎಐಕೆಕೆಎಮ್‌ಎಸ್ ನ ಶಹಾಬಾದ ತಾಲೂಕಿನ ಕಾರ್ಯದರ್ಶಿ ರಾಜೇಂದ್ರ ಆತ್ನೂರ್ ಮಾತನಾಡಿ, ಸರಕಾರದಿಂದ ಸರ್ವೆ ಕಾರ್ಯ ಮುಗಿಸಿ ಹಲವು ತಿಂಗಳುಗಳು ಕಳೆದರೂ ಸಹ ಇನ್ನೂ ಕೆಲವು ರೈತರಿಗೆ ನಷ್ಟ ಪರಿಹಾರ ತಲುಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರಕಾರವು ಕೂಡಲೇ ಇದರ ಬಗ್ಗೆ ಗಮನಹರಿಸಿ, ಸಂಕಷ್ಟದಲ್ಲಿದ್ದರುವ ಎಲ್ಲಾ ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕು ಹಾಗೂ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಸಹಕಾರ್ಯದರ್ಶಿ ನೀಲಕಂಠ ಹುಲಿ, ಎ.ಐ.ಕೆ.ಕೆ.ಎಂ.ಎಸ್. ಅಧ್ಯಕ್ಷ ಮಹಾದೇವ ಸ್ವಾಮಿ, ಮಲ್ಲಣ್ಣಗೌಡ ತೊನಸಿನಹಳ್ಳಿ, ಸುಗಣ್ಣಗೌಡ ತರನಳ್ಳಿ, ಮಹಾದೇವ ಸೌಕಾರ ತರನಳ್ಳಿ, ಶಂಕರ ತರನಳ್ಳಿ, ಶಿವಕುಮಾರ ಬುರ್ಲಿ, ಚಂದ್ರು ಮರಗೋಳ, ನಿಂಗಪ್ಪ ಹೊನಗುಂಟಾ, ಮಹೆಬೂಬ ಪಟೇಲ್ ಮುತ್ತಗಾ, ಗುರುಲಿಂಗಯ್ಯ ಸ್ವಾಮಿ, ಹಣಮಂತರಾಯ ಭಂಕೂರ, ಮಲ್ಲಿಕಾರ್ಜುನ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News