ಕಲಬುರಗಿ| ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ "ಮಕ್ಕಳ ಮನೆ" ಆರಂಭ
ಕಲಬುರಗಿ: ಅಜೀಂ ಪ್ರೇಮ್ ಜೀ ಫೌಂಡೇಶನ್ ಹಾಗೂ ಸೇವಾ ಸಂಗಮ ಸಮಾಜ ಸೇವಾ ಸಂಘ ವತಿಯಿಂದ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜೇವರ್ಗಿಯ ಇಜೇರಿಯಲ್ಲಿ "ಮಕ್ಕಳ ಮನೆ" ಮಕ್ಕಳ ಆರೈಕೆ ಕೇಂದ್ರವನ್ನು ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಡಾ.ಅಜಯ್ ಸಿಂಗ್, ದೇಶದಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಶನ್ ಫೌಂಡೇಷನ್‌ನಿಂದ ಮಕ್ಕಳ ಮನೆಗಳು ಆರಂಭವಾಗಿವೆ. ಆದರೆ ರಾಜ್ಯದಲ್ಲಿ ಅದರಲ್ಲೂ ಜೇವರ್ಗಿಯಿಂದಲೇ ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಸಂತಸ ತಂದಿದೆ. ಮಕ್ಕಳ ಮನೆ ಯೋಜನೆ ಹಳ್ಳಿಗಾಡಿನ ತಾಯಂದಿರಿಗೆ ತುಂಬ ಉತ್ತಮ ವರದಾನವಾಗಿದೆ ಎಂದು ಹೇಳಿದರು.
ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಸುಮಾರು 40 ಮಕ್ಕಳ ಮನೆ ಕೇಂದ್ರ ಉದ್ಘಾಟನೆಯ ಯೋಜನೆ ಇದಾಗಿದೆ ಎಂದು ವಿವರಿಸಿದರು.
ಮಕ್ಕಳ ಮನೆಯಲ್ಲಿ 3 ವರ್ಷದೊಳಗಿನ ಮಕ್ಕಳ ಆರೈಕೆಗೆ ಸವಲತ್ತಿದೆ. ತಾಲೂಕಿನ ಜನತೆ, ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಹಾಗೂ ಸರಕಾರದ ಸಂಪೂರ್ಣ ಸಹಕಾರ ಅಜೀಂ ಪ್ರೇಮ್ ಜೀ ಫೌಂಡೇಶನ್ ಜೊತೆಗೆ ಇರುತ್ತದೆ ಎಂದು ಹೇಳಿದರು.
ಸಂದರ್ಭದಲ್ಲಿ ಅಜೀಂ ಪ್ರೇಮ್ ಫೌಂಡೇಶನ್ ಕರ್ನಾಟಕದ ಮುಖ್ಯಸ್ಥರಾದ ಡಾ. ಜಿ ರುದ್ರೇಶ್, ಇಜೇರಿಯ ಮುಖಂಡರು ಹಾಜರಿದ್ದರು.