×
Ad

ಕಲಬುರಗಿ| ಡಿ.28ರಂದು ಶಿವಶರಣ ಮಾದಾರ ಚೆನ್ನಯ್ಯನವರ ಪುತ್ಥಳಿ ಅನಾವರಣ

Update: 2025-12-27 19:41 IST

ಚಿಂಚೋಳಿ, ಡಿ.27: ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಶಿವಶರಣ ಮಾದಾರ ಚೆನ್ನಯ್ಯನವರ ಭವ್ಯ ಪುತ್ಥಳಿ ಅನಾವರಣ ಮತ್ತು 975ನೇ ಜಯಂತ್ಯುತ್ಸವ ಕಾರ್ಯಕ್ರಮವು ಡಿಸೆಂಬರ್ 28ರಂದು ನಡೆಯಲಿದೆ.

ಮಾದಿಗ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಐತಿಹಾಸಿಕ ಕಾರ್ಯಕ್ರಮವು ರವಿವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆರಂಭವಾಗಲಿದೆ. ಬೆಳಿಗ್ಗೆ 11:30ಕ್ಕೆ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಪುತ್ಥಳಿ ಅನಾವರಣ ಸ್ಥಳದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ.

ಮೆರವಣಿಗೆಯಲ್ಲಿ 1500 ತಮಟೆಗಳು, 1000 ಡೋಲುಗಳು ಮತ್ತು 1200 ಮಹಿಳೆಯರಿಂದ ಕುಂಭಮೇಳ ಇರಲಿದೆ. ಮಧ್ಯಾಹ್ನ 2:30ಕ್ಕೆ ಪುರಸಭೆ ಕಚೇರಿ ಎದುರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ.

ಮಧ್ಯಾಹ್ನ 3:30ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಧರ್ಮಸಭೆ ನಡೆಯಲಿದ್ದು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಲಿದ್ದಾರೆ. ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಸಂಸದ ರಾಧಾಕೃಷ್ಣ ದೊಡ್ಡಮನಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎನ್. ನಾರಾಯಣಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಪೂಜ್ಯ ಶಿವಶಂಕರ ಶಿವಾಚಾರ್ಯರು, ಶ್ರೀ ಹವಾ ಮಲ್ಲಿನಾಥ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಈ ಕುರಿತು ಮಾತನಾಡಿದ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲರಾವ್ ಕಟ್ಟಮನಿ ಮತ್ತು ಕಾರ್ಯಕ್ರಮದ ಅಧ್ಯಕ್ಷ ಜಗನ್ನಾಥ ಚಿಂತಪಳ್ಳಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ಸೇಡಂನಲ್ಲಿ ಮಾದಾರ ಚೆನ್ನಯ್ಯನವರ ಪುತ್ಥಳಿ ಸ್ಥಾಪನೆಯಾಗುತ್ತಿರುವುದು ಇತಿಹಾಸ ನಿರ್ಮಿಸುವ ಕೆಲಸವಾಗಿದೆ. ತಾಲೂಕಿನ ಮತ್ತು ಜಿಲ್ಲೆಯ ಸಮಸ್ತ ಸಮಾಜ ಬಾಂಧವರು ಹಾಗೂ ಶರಣರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿಜಯಕುಮಾರ್ ಆಡಕಿ, ಜಗನ್ನಾಥ ಕಟ್ಟಿ ಪ್ರದೀಪ ಮೇತ್ರಿ, ವಿನೋದ ಒಂಕಾರ, ಆಕಾಶ ಕೊಳ್ಳುರ, ಮಾರುತಿ ಕೊಡಂಗಲ್, ಸುರೇಶ ಸೇರಿಕಾರ, ಪ್ರಶಾಂತ ಕಟ್ಟಿ ವಿಜಯ ಕುಮಾರ ಕೊರಡಂಪಳ್ಳಿ ಶರಣಪ್ಪ ನೊತಿಹೊಲ, ಮಚೇಂದ್ರ ಸೇರಿಕಾರ, ನಾಗೇಶ್ವರರಾವ ಕಿವಣ್ರ ಸೇರಿದಂತೆ ಸಮಾಜದ ಪ್ರಮುಖ ಮಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News