ಡಿ.29ರಂದು ಕೋಲಿ, ಕಬ್ಬಲಿಗ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಪ್ರತಿಭಟನೆ: ಪಿಡ್ಡಪ್ಪ ಜಾಲಗಾರ್
ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆಗೆ ಆಗ್ರಹಿಸಿ ಇದೇ ಡಿ.29 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪಾಲ್ಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಕೋಲಿ ಸಮಾಜದ ಕಲ್ಯಾಣ ಕರ್ನಾಟಕದ ಮಾಜಿ ಸಂಘಟನಾ ಕಾರ್ಯದರ್ಶಿ ಪಿಡ್ಡಪ್ಪ ಜಾಲಗಾರ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಿಡ್ಡಪ್ಪ ಜಾಲಗಾರ್, ಕೋಲಿ, ಕಬ್ಬಲಿಗ ಸಮುದಾಯದ ಸ್ವಾಭಿಮಾನಿಗಳ ಪ್ರತಿಭಟನಾ ರ್ಯಾಲಿಯು ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದೆ. ಪ್ರತಿಭಟನೆಯನ್ನು ಸಾವಿರಾರು ಜನ ಸೇರಿ ಯಶಸ್ವಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದರೂ ಕೇಂದ್ರ ಸರಕಾರ ಪದೇ ಪದೇ ವಾಪಸ್ ಕಳುಹಿಸುತ್ತಿದೆ. ಪ್ರಧಾನ ಮಂತ್ರಿಗಳು, ಸಚಿವರು, ಶಾಸಕರು ನಮ್ಮ ಸಮುದಾಯದ ಮತ ಪಡೆದು ಈಗ ಸಮಾಜದ ಬೇಡಿಕೆಗೆ ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ. ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಪಿಡ್ಡಪ್ಪ ಜಾಲಗಾರ್ ಆಗ್ರಹಿಸಿದ್ದಾರೆ.