ಕಲಬುರಗಿ | ಚಿತ್ತಾಪುರನಲ್ಲಿ ಪಥಸಂಚಲನ ಹಿನ್ನೆಲೆ : ಭೀಮ್ ಆರ್ಮಿ, ದಲಿತ ಪ್ಯಾಂಥರ್ಸ್ ಗೆ 8 ದಾಖಲೆ ಸಲ್ಲಿಸಲು ತಹಶೀಲ್ದಾರರಿಂದ ಹಿಂಬರಹ
ಸಾಂದರ್ಭಿಕ ಚಿತ್ರ PC: x.com/VSKKarnataka
ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿನ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿರುವ ಪಥ ಸಂಚಲನಕ್ಕೆ ಅನುಮತಿ ಕೊಡುವ ಕುರಿತಾಗಿ ಚರ್ಚೆ ರಾಜ್ಯದಲ್ಲೇ ಭಾರೀ ಸಂಚಲನ ಮೂಡಿಸುತ್ತಿದೆ. ಹೈಕೋರ್ಟ್ ಸೂಚನೆಯಂತೆ ಆರೆಸ್ಸೆಸ್ ನ.2 ರಂದು ಪಥಸಂಚಲನಕ್ಕೆ ನಿರ್ಧರಿಸಿದೆ. ಇದರ ನಡುವೆಯೇ ನಮಗೂ ಕೂಡ ಅದೇ ದಿನದಂದು ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ದಲಿತ ಪ್ಯಾಂಥರ್ಸ್ ಹಾಗೂ ಭೀಮ್ ಆರ್ಮಿ ಮನವಿ ನೀಡಿವೆ.
ಮನವಿ ಸ್ವೀಕರಿಸಿದ ಚಿತ್ತಾಪುರ ತಹಶೀಲ್ದಾರ್ ಅವರು, ದಲಿತ ಪ್ಯಾಂಥರ್ಸ್ ಹಾಗೂ ಭೀಮ್ ಆರ್ಮಿಗೆ 8 ದಾಖಲೆ ಸಲ್ಲಿಸಲು ಹಿಂಬರಹ ಕೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಚಿತ್ತಾಪುರ ತಹಶೀಲ್ದಾರ್, ಆರೆಸ್ಸೆಸ್ ಸಲ್ಲಿಸಿದ ಮನವಿ ಸ್ವೀಕರಿಸಿ ಅವರಿಗೂ ವಿವಿಧ ದಾಖಲೆಗಳನ್ನು ಸಲ್ಲಿಸುವಂತೆ ಹಿಂಬರಹ ನೀಡಲಾಗಿತ್ತು. ಅವರೀಗ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ತಹಶೀಲ್ದಾರ್ ಕೇಳಿದ 8 ದಾಖಲೆಗಳು :
1. ಸದರಿ ಪಥ ಸಂಚಲನದಲ್ಲಿ ಎಷ್ಟು ಜನ ಭಾಗವಿಸಿರುತ್ತಿರಿ ಎಂಬ ಮಾಹಿತಿ ನೀಡಿರುವುದಿಲ್ಲ.
2. ಸದರಿ ಪಥ ಸಂಚಲನದಲ್ಲಿ ಚಿತ್ತಾಪೂರ ತಾಲೂಕು ಹೊರತು ಪಡಿಸಿ ಬೇರೆ ತಾಲೂಕು ಅಥವಾ ಬೇರೆ ಜಿಲ್ಲೆಯ ಎಷ್ಟು ಜನರು ಭಾಗವಹಿಸುತ್ತಾರೆ ಎಂಬ ಮಾಹಿತಿ ನೀಡಿರುವುದಿಲ್ಲ.
3. ಬಜಾಜ ಕಲ್ಯಾಣ ಮಂಟಪ ಅವರಣದ ಮಾಲಕರ ಅನುಮತಿ ಪತ್ರ ಸಲ್ಲಿಸಿರುವುದಿಲ್ಲ.
4. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮ ವಹಿಸುವ ಒಪ್ಪಿಗೆ ಪತ್ರ ಸಲ್ಲಿಸಿರುವುದಿಲ್ಲ.
5. ತಮ್ಮ ಅನುಮತಿ ಪತ್ರದಲ್ಲಿ ನೋಂದಣಿ ಸಂಖ್ಯೆ ನಮೂದಿಸಿದ್ದೀರಿ ಆದರೆ ನೋಂದಣಿ ಪ್ರಮಾಣ ಪತ್ರದ ಧೃಡೀಕರಣ ಪತ್ರ ಸಲ್ಲಿಸಿರುವುದಿಲ್ಲ.
6. ಸದರಿ ಪಥ ಸಂಚಲನದ ಕಾರ್ಯಕ್ರಮ ಕುರಿತು ತುರ್ತು ಸಂವಹನ ಕೈಗೊಳ್ಳಲು ಜವಾಬ್ದಾರಿಯುತ 10 ಜನ ಸ್ಥಳಿಯ ಮುಖಂಡರ ಮಾಹಿತಿ ಸಲ್ಲಿಸಿರುವುದಿಲ್ಲ.
7. ಸದರಿ ಪಥ ಸಂಚಲನ ಕಾರ್ಯಕ್ರಮವು ಸ್ಥಳಿಯ ಚಿತ್ತಾಪೂರ ಘಟಕದಿಂದ ಕೈಗೊಳ್ಳುತ್ತಿದ್ದಿರೋ ಅಥವಾ ಮತ್ಯಾವ ಘಟಕದಿಂದ ಕೈಗೊಳ್ಳುತ್ತಿರುವ ಬಗ್ಗೆ ಸ್ಪಷ್ಟಿಕರಣ ನೀಡಿರುವುದಿಲ್ಲ.
8. ಸದರಿ ಪಥ ಸಂಚಲನದ ಪ್ರಾರಂಭ ಮತ್ತು ಮುಕ್ತಾಯದ ಸಮಯದ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಹಾಗಾಗಿ ಈ ಎಲ್ಲಾ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿದ ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದೆಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.