ಕಲಬುರಗಿ | ಸಾಮಾಜಿಕ ಜಾಲತಾಣಗಳಿಂದ ಎಚ್ಚರವಿರಿ: ಖ್ವಾಜಾ ಹುಸೇನ್
ಕಲಬುರಗಿ : ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೋಸ, ವಂಚನೆ, ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳಿಂದ ಸಾರ್ವಜನಿಕರು ಜಾಗರೂಕರಾಗಬೇಕು ಎಂದು ಎಂ.ಬಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಖ್ವಾಜಾ ಹುಸೇನ್ ಹೇಳಿದರು.
ಇಲ್ಲಿನ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎಂ.ಬಿ. ನಗರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಫೋನಿನಲ್ಲಿ ಯಾರಿಗೂ ಕೆವೈಸಿ, ಓಟಿಪಿ ನೀಡಬಾರದು, ಪಾರ್ಸಲ್ ಹಾಗೂ ಕೊರಿಯರ್ ಸಂಬಂಧಿಸಿದ ಸಂಶಯಾಸ್ಪದ ಕರೆಗಳಿಗೆ ಸ್ಪಂದಿಸಬಾರದು ಎಂದು ಸಲಹೆ ನೀಡಿದರು.
ಬಹುತೇಕ ಸೈಬರ್ ವಂಚಕರು ಬಹುಭಾಷಿಕರಾಗಿದ್ದು, ಕನ್ನಡ ಭಾಷೆ ತಿಳಿಯದವರಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಕನ್ನಡದಲ್ಲೇ ಮಾತನಾಡುವುದರಿಂದ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎಂದರು.
ಪಿಎಸ್‌ಐ ಅನಿತಾ ಗುತ್ತೇದಾರ, ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು.
ಸಭೆಯಲ್ಲಿ ಕಾಲೋನಿಯ ಹಿರಿಯರಾದ ಬಿ.ಎನ್.ಪುಣ್ಯಶೆಟ್ಟಿ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಎಸ್.ಜಿ. ಬಿರಾದಾರ ಸೇರಿದಂತೆ ಹಲವರು ಸಲಹೆಗಳನ್ನು ನೀಡಿದರು. ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಎಎಸ್‌ಐ ಅಯ್ಯುಬ್, ಸಿವಿಲ್ ಪೊಲೀಸ್ ಸಿಬ್ಬಂದಿ ಹಾಗೂ ಕಾಲೋನಿಯ ಗಣ್ಯರು ಉಪಸ್ಥಿತರಿದ್ದರು.