×
Ad

ಕಲಬುರಗಿ: ರಕ್ತದಾನ ಕುರಿತು ಜಾಗೃತಿ ಕಾರ್ಯಕ್ರಮ

Update: 2025-10-28 22:16 IST

ಕಲಬುರಗಿ: ಬಾಣಂತಿಯರಿಗೆ, ಅಪಘಾತಕ್ಕೆ ಒಳಗಾದವರಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವದರಿಂದ ಮೂರು ಜನರ ಪ್ರಾಣ ಉಳಿಸಬಹುದು ಎಂದು ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಹಬಾದಿ ಹೇಳಿದರು.

ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ವತಿಯಿಂದ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ರಕ್ತದಾನ ಉಪ ಸಮಿತಿಯ ಸಂಚಾಲಕರಾದ ಡಾ. ಸಯ್ಯದ್ ಸನಾವುಲ್ಲ ಮಾತನಾಡಿ, ಮನುಷ್ಯ ಯಾವಾಗಲೂ ಉದ್ವೇಗಕ್ಕೆ ಒಳಗಾಗಬಾರದು. ಇದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಂಡು, ಮೊಬೈಲ್ ನಿಂದ ದೂರವಿರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಶಾಂತಾ ಅಸ್ಟಿಗೆ ಮಾತನಾಡಿ, ರೆಡ್ ಕ್ರಾಸ್ ಒಂದು ಉತ್ತಮ ಸೇವಾ ಸಂಸ್ಥಯಾಗಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಒಂದು ವರ್ಷದಲ್ಲಿ ಪುರುಷರು ನಾಲ್ಕು ಸಲ ಮಹಿಳೆಯರು ಮೂರು ಸಲ ರಕ್ತದಾನ ಮಾಡಬಹುದು. ರಕ್ತದಾನಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯದಿಂದಿರಬೇಕೆಂದು ತಿಳಿಸಿದರು.

ವೇದಿಕೆಯ ಮೇಲೆ ಜಿಮ್ಸ್ ಆಸ್ಪತ್ರೆಯ ಡಾ. ಜಗದೀಶ ಕಟ್ಟಿಮನಿ, ಐಕ್ಯೂಏಸಿ ಸಂಯೋಜಕ ಡಾ. ಸಂದೀಪ್ ತಿವಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ. ಶರಣಪ್ಪ ಸೈದಾಪೂರ ಉಪಸ್ಥಿತರಿದ್ದರು.

ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ. ಖುತೇಜಾ ನಸ್ರಿನ್ ಸ್ವಾಗತಿಸಿದರು. ಎನ್ ಎಸ್ಸೆಸ್ ಸಂಚಾಲಕ ಡಾ. ಶರಣಪ್ಪ ಗುಂಡಗುರ್ತಿ ಪ್ರಾಸ್ತಾವಿಕ ನುಡಿದರು. ಕನ್ನಡ ಅಧ್ಯಾಪಕ ಭೀಮಣ್ಣ ನಿರೂಪಿದರು. ಹಿಂದಿ ವಿಭಾಗದ ಮುಖ್ಯಸ್ಥ ಕುಪೇಂದ್ರ ವಂದಿಸಿದರು. ರಕ್ತದಾನ ಶಿಬಿರದಲ್ಲಿ ಅಧ್ಯಾಪಕರು ಸೇರಿ 38 ಜನರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News