ಕಲಬುರಗಿ | ಸಾಹಿತ್ಯದ ಮೂಲಕ ಸದೃಢ ಸಮತಾ ಸಮಾಜ ಕಟ್ಟುವ ಕೆಲಸ ಆಗಬೇಕು : ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ್
ಕಲಬುರಗಿ: ಪ್ರತಿದಿನ ಭಯದ ವಾತವರಣ ಸೃಷ್ಟಿ ಆಗುತ್ತಿರುವ ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಸಂಸ್ಕೃತಿಯ ಮೂಲಕ ಸಮತಾ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದು ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿಯಲ್ಲಿ ಗುಲ್ಬರ್ಗಾ ವಿವಿಯ ಹರಿಹರ ಸಭಾಂಗಣದಲ್ಲಿ ಮಂಗಳವಾರ ಸಮಾರೋಪ ಭಾಷಣ ಮಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಇತರೆ ಪ್ರದೇಶಗಳಿಗಿಂತ ಹೆಚ್ಚು ದಮನಕ್ಕೆ ಒಳಗಾಗಿರುವ ಮತ್ತು ಪ್ರತಿರೋಧ ಒಡ್ಡಿದ ನಾಡು, ಬುದ್ಧ, ಬಸವ, ಅಂಬೇಡ್ಕರ್ ಅವರ ಪ್ರಭಾವ ಮತ್ತು ಹೆಚ್ಚುಗಾರಿಕೆ ಈ ಭೂಮಿಗಿದೆ ಎಂದು ಹೇಳಿದರು.
ವೈದಿಕ ಸಂಸ್ಕೃತಿ ಅಸ್ಪೃಶ್ಯರ ಗೂಡನ್ನಾಗಿ ಮಾಡಿದೆ. ಅಂಬೇಡ್ಕರ್ ಅವರು ಇದಕ್ಕೆ ಪ್ರತಿರೋಧ ಒಡ್ಡಿ ಭಾರತದಲ್ಲಿ ಸ್ವಾವಲಂಬನೆ, ಸ್ವಾಭಿಮಾನ ಚಳವಳಿ ಆರಂಭಿಸಿದರು ಎಂದು ತಿಳಿಸಿದರು.
ನಿಜಾಮನ ವಿರುದ್ದ ಹೋರಾಟ ಮಾಡಿದ ತೆಲಂಗಾಣದಲ್ಲಿ ಸಶಸ್ತ್ರ ಪಡೆ ಜಮೀನ್ದಾರಿ ಪದ್ಧತಿ ವಿರುದ್ಧ ಈ ಭಾಗದಲ್ಲಿ ಹೋರಾಟ ನಡೆಯಿತು. ಈ ಚಿಂತನೆಗಳಿರುವ ಈ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಚಿಂತನೆಗಳು ನಡೆಯುತ್ತಿವೆ. ಕೆಲವರು ಕಲ್ಯಾಣ ಕ್ರಾಂತಿ ನಡೆದಿಲ್ಲ. ಬಸವಣ್ಣ ಹೋರಾಟ ಮಾಡಿಲ್ಲ ಎಂದು ಸಾಂಸ್ಕೃತಿಕ ಸರ್ವಾಧಿಕಾರವನ್ನು ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಮೂಲಕ ಬದುಕನ್ನು ಸಾಗಿಸುವುದನ್ನು ಬಿಟ್ಟು ನೀರಿನಲ್ಲಿ ಮುಳುಗಿದರೆ ನೆಮ್ಮದಿ ಸಿಗುವುದಿಲ್ಲ ಈ ವಾಸ್ತವಿಕ ಸತ್ಯವನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕುಲಸಚಿವೆ (ಮೌಲ್ಯ ಮಾಪನ) ಪ್ರೊ. ಮೇಧಾವಿನಿ ಕಟ್ಟಿ, ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ವಿದ್ಯಾವಿಷಯಕ ಪರಿಸತ್ ಸದಸ್ಯ ಎಸ್.ಎನ್. ಗಾಯಕವಾಡ, ಅಬ್ದುಲ್ ರಬ್ ಉಸ್ತಾದ್ ವೇದಿಕೆಯಲ್ಲಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ.ಪೋತೆ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್.ಚೌಗಲೆ, ಡಾ.ಪಿ.ನಂದಕುಮಾರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಡಾ.ಸಂತೋಷ ಕಂಬಾರ ನಿರೂಪಿಸಿದರು.