ಕಲಬುರಗಿ | ಜಾತ್ರೆಯಲ್ಲಿ ಕಳ್ಳತನವಾದ ಕಾರು ಮಾಲಕನಿಗೆ ಹಸ್ತಾಂತರ : ಆರೋಪಿ ಬಂಧನ
Update: 2025-02-09 18:12 IST
ಕಲಬುರಗಿ : ನಾಲವಾರ ಗ್ರಾಮದ ಕೋರಿಸಿದ್ದೇಶ್ವರ ಜಾತ್ರೆಯಲ್ಲಿ ನಿಲ್ಲಿಸಿದ್ದ ಕಾರು ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ ಇನ್ನೋವಾ ಕಾರು ಮಾಲಕನಿಗೆ ಹಸ್ತಾಂತರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಠ್ಠಲ್ ಲಸ್ಕರೆ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಇನ್ನಿತರೆ ಆರೋಪಿಗಳಾದ ಸುನೀಲ್ ಬೀಡ್, ರಾಜು ಗಾಯಕವಾಡ್, ಪ್ರಶಾಂತ, ಸಹದೇವ ತಾಂದಳೆ ಎಂಬುವವರು ಕಳ್ಳತನದಲ್ಲಿ ಭಾಗಿಯಾಗಿದ್ದು, ಬದಾಮಿಯ ಬನಶಂಕರಿ ಮತ್ತು ಆಂಧ್ರಪ್ರದೇಶದ ಎಮ್ಮೆಗನೂರ್ ಜಾತ್ರೆಯಲ್ಲೂ ಕಾರುಗಳನ್ನು ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಬಂಧಿತ ಆರೋಪಿ ಬಾಯಿ ಬಿಟ್ಟಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ಕಲಬುರಗಿ ಎಸ್.ಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದ್ದಾರೆ.
ಜ.30ರಂದು ನಾಲವಾರ ಗ್ರಾಮದ ಕೋರಿಸಿದ್ದೇಶ್ವರ ಜಾತ್ರೆಯಲ್ಲಿ ನಿಲ್ಲಿಸಿದ್ದ ಕಾರು ಕಳ್ಳತನವಾಗಿರುವ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.