×
Ad

ಕಲಬುರಗಿ | ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ನ್ಯಾಯಾಲಯದಿಂದ ಅನುಮತಿ

Update: 2024-03-06 23:33 IST

ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ಶಿವಲಿಂಗ ಎನ್ನಲಾಗುತ್ತಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಾರ್ಚ್ 8 ರಂದು ಶಿವರಾತ್ರಿ ನಿಮಿತ್ತ ಪೂಜೆ ಸಲ್ಲಿಸಲು ಶರತ್ತು ಬದ್ಧ ಅನುಮತಿ ನೀಡಿ ಕಲಬುರಗಿ ಉಚ್ಚ ನ್ಯಾಯಾಲಯ ಪೀಠ ಆದೇಶ ಹೊರಡಿಸಿದೆ.

ದರ್ಗಾದ ಆವರಣದಲ್ಲಿ ಮಹಾಶಿವರಾತ್ರಿಯ ದಿನವಾದ ಶುಕ್ರವಾರದಂದು ಮಧ್ಯಾಹ್ನದ ನಂತರ ಪೂಜೆಗೆ 15ಜನ ಹಿಂದೂಗಳಿಗೆ ಅವಕಾಶ ಕೊಟ್ಟಿದೆ. ಪೂಜೆ ಸಲ್ಲಿಸುವ 15 ಜನರ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಇಲ್ಲದಿದ್ದರೆ ಅನುಮತಿ ನೀಡಲಾಗುವುದಿಲ್ಲ ಎಂದು ಸೂಚಿಸಿದೆ.

ಕಳೆದ ಬಾರಿಯೂ ಸಹ ಇದೇ ರೀತಿಯಲ್ಲಿ ಉಚ್ಚ ನ್ಯಾಯಾಲಯವು ಅನುಮತಿ ಕೊಟ್ಟಿದ್ದು, ಆದಾಗ್ಯೂ, ಪೂಜೆಯ ನಂತರದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದವು. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾಗಿದ್ದ ಬಸವರಾಜ್ ಮತ್ತಿಮೂಡ್, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಬಾರಿ ಹಿಂದಿನ ಹಿಂಸಾತ್ಮಕ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಈಗಾಗಲೇ ವಕ್ಫ್ ನ್ಯಾಯ ಮಂಡಳಿಯು ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿಯಂದು ಹಿಂದೂಗಳು ರಾಘವ ಚೈತನ್ಯರ ಲಿಂಗಕ್ಕೆ ಪೂಜೆ ಸಲ್ಲಿಸುವುದಕ್ಕೆ ಅನುಮತಿ ನಿರಾಕರಿಸಿತ್ತು. ಈಗ ಉಚ್ಛ ನ್ಯಾಯಾಲಯದ ತೀರ್ಪಿನಿಂದಾಗಿ ವಕ್ಫ್ ನ್ಯಾಯ ಮಂಡಳಿಯ ತೀರ್ಪಿಗೆ ಹಿನ್ನಡೆಯಾಗಿದೆ.

ಇಲ್ಲಿನ ಉಚ್ಚ ನ್ಯಾಯಾಲಯಕ್ಕೆ ರಾಘವ ಚೈತನ್ಯ ಮಂದಿರದ ಜೀರ್ಣೋದ್ಧಾರ ಸಮಿತಿಯು ಸಹ ಅರ್ಜಿಯನ್ನು ಸಲ್ಲಿಸಿ, ಮಹಾ ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯರ ಶಿವಲಿಂಗಕ್ಕೆ ಸುಮಾರು 100 ಜನ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿತ್ತು. ಸಮಿತಿಯಲ್ಲಿ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರ ಪುತ್ರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್, ಸಮಿತಿ ಅಧ್ಯಕ್ಷ ನ್ಯಾಯವಾದಿ ಎಸ್.ಎ. ಪಾಟೀಲ್ ಮುಂತಾದವರು ಅರ್ಜಿ ಸಲ್ಲಿಸಿದ್ದರು.

ಅದೇ ರೀತಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಸಹ ಪ್ರತ್ಯೇಕ ಅರ್ಜಿ ಸಲ್ಲಿಸಿ, ಮಹಾ ಶಿವರಾತ್ರಿಯಂದು ರಾಘವ ಚೈತನ್ಯರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು 500 ಜನ ಅನುಮತಿ ಕೊಡಲು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News