×
Ad

ಕಲಬುರಗಿ| ಸಿಯುಕೆ 9ನೇ ಘಟಿಕೋತ್ಸವ : ಹಣ್ಣು ಮಾರುವವನ ಮಗಳಿಗೆ ಒಲಿದ ಚಿನ್ನದ ಪದಕ

ಭವಿಷ್ಯದ ಏಳಿಗೆಗೆ ಡಿಜಿಟಲ್ ಭಾರತ ನಿರ್ಮಿಸೋಣ: ನ್ಯಾ. ದಿನೇಶ್‌ ಮಹೇಶ್ವರಿ

Update: 2025-11-08 18:39 IST

ಕಲಬುರಗಿ: ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿರುವ ಭಾರತ ಇದೀಗ ಡಿಜಿಟಲ್ ಶಕ್ತಿ ಕೇಂದ್ರವಾಗಿಯೂ ದಾಪುಗಾಲು ಇಟ್ಟಿದೆ. ದತ್ತಾಂಶ ಮತ್ತು ಮಾನವೀಯತೆಯನ್ನು ರಕ್ಷಿಸುವುದರ ಜೊತೆಗೆ ಭವಿಷ್ಯದ ಏಳಿಗೆಗೆ ಡಿಜಿಟಲ್ ಭಾರತ ನಿರ್ಮಿಸೋಣ ಎಂದು ಭಾರತದ ಕಾನೂನು ಆಯೋಗದ ಅಧ್ಯಕ್ಷರು ಮತ್ತು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹೇಳಿದರು.

ಶನಿವಾರ ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ವಿವಿಧ್ಯೋದ್ದೇಶ ಭವನದಲ್ಲಿ ಜರುಗಿದ ವಿ.ವಿ.ಯ ಒಂಭತ್ತನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ, ಯಂತ್ರಗಳ ಬುದ್ಧಿವಂತಿಕೆ ಬದಲಾಗಿ ಮಾನವ ಘನತೆಯನ್ನು ಎತ್ತಿ ಹಿಡಿಯುವತ್ತ ನಾವು ಸಾಗಬೇಕಿದೆ ಎಂದರು.

ಇಂದಿನ ತಂತ್ರಜ್ಞಾನದ ಜಗತ್ತಿನಲ್ಲಿ ಘನತೆಯ ಮಾಪನಗಳು “ನಾವು ನಿಜವಾಗಿಯೂ ಯಾರು” ಎಂಬುದರಿಂದ 'ನಾವು ಪ್ರಪಂಚದ ಮುಂದೆ ಹೇಗೆ ಕಾಣಿಸಿಕೊಳ್ಳುತ್ತೇವೆ' ಎಂಬುದಕ್ಕೆ ಬದಲಾಗಿದೆ. ಇದು ನೈಜ ಅಸ್ತಿತ್ವವನ್ನು ಬಿಟ್ಟು ಕೃತಕ ಲೋಕದ ಮೌಲ್ಯಮಾಪನಕ್ಕಾಗಿ ಹುಡುಕಾಟ ನಡೆಸಿದಂತಿದೆ. “ಘನತೆಯು” ಹೊಸ ಪೀಳಿಗೆಗೆ ಕೇವಲ ಒಂದು ತತ್ವವಾಗಿರಬಾರದು, ಬದಲಾಗಿ ಜೀವನದ ಅವಿಭಾಜ್ಯ ಅಭ್ಯಾಸ ಮತ್ತು ಸಾರವಾಗಿರಬೇಕು. ನಮ್ಮ ಸಂವಿಧಾನದಲ್ಲಿ ಪ್ರಸ್ತಾಪಿಸಿರುವಂತೆ 'ಭ್ರಾತೃತ್ವ' ಕೇವಲ ಒಂದು ತತ್ವವಾಗಿ ಅಲ್ಲ, ಮಾರ್ಗದರ್ಶಕ ಮನೋಭಾವವಾಗಿ ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಹೀಗಾಗಿ ಭಾತೃತ್ವ ಭಾವನೆಯಿಂದ ಸಾಗಿದ್ದಲ್ಲಿ ಸಾಮೂಹಿಕ ಉನ್ನತಿಗೆ ಪ್ರೇರಣೆಯಾಗಲಿದೆ ಎಂದು  ಅಭಿಪ್ರಾಯಪಟ್ಟರು.

ವಸುದೈವ ಕುಟುಂಬಕ್ಕಂ ಪರಿಕಲ್ಪನೆಯಲ್ಲಿ ಸರ್ವರನ್ನು ಒಳಗೊಂಡಂತೆ ಸಹೋದರತ್ವದಿಂದ ಮುನ್ನಡೆಯುತ್ತಿರುವ ಭಾರತ ತನ್ನ ಗತ ವೈಭವವನ್ನು ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿದೆ. ನೀವು ಸಂಪಾದಿಸಿದ ಜ್ಞಾನ ನಿಮ್ಮ ಆಸ್ತಿ ಅಲ್ಲ. ಸರ್ವ ಜನರ ಏಳಿಗೆಗೆ ಮತ್ತು ದೇಶದ ಪ್ರಗತಿಗೆ ಸಹಾಯಕವಾಗಬೇಕು. ಆ ನಿಟ್ಟಿನಲ್ಲಿ ಹೆಜ್ಜೆ ಇಡಿ ಎಂದು ಪದವಿ ಪಡೆದು ಸಾಧನೆ ಮಾಡಲು ನವ ಕನಸಿನೊಂದಿಗೆ ಹೊರಟಿರುವ ವಿದ್ಯಾರ್ಥಿ ಸಮುದಾಯಕ್ಕೆ ನ್ಯಾ.ದಿನೇಶ್‌ ಮಹೇಶ್ವರಿ ಕರೆ ನೀಡಿದರು.

“ಜೀವನದಲ್ಲಿ ಒಂದು ಗುರಿಯನ್ನು ಹೊಂದಿರಿ. ನಿರಂತರವಾಗಿ ಜ್ಞಾನ ಸಂಪಾದಿಸಿ, ಕಷ್ಟಪಟ್ಟು ಕೆಲಸ ಮಾಡಿ ಶ್ರೇಷ್ಠ ಜೀವನವನ್ನು ಅರಿತುಕೊಳ್ಳಲು ಪರಿಶ್ರಮ ಹೊಂದಿರಿ" ಎಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದಂತೆ ಹಳೆಯ ಸಮಸ್ಯೆಗಳನ್ನು ಹೊಸ ಕಣ್ಣುಗಳಿಂದ ನೋಡುವ ಮತ್ತು ಭರವಸೆಯ ದೀಪಗಳಾಗಿ ಹೊರಹೊಮ್ಮುವ ದಾರ್ಶನಿಕರು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವವರ ಅವಶ್ಯಕತೆ ಈ ಜಗತ್ತಿಗೆ ತುಂಬಾ ಇದೆ. ನಿಮ್ಮ ಮುಂದಿನ ಪ್ರಯಾಣದಲ್ಲಿ, "ನೀವು ಎಲ್ಲಿಂದ ಬಂದಿದ್ದೀರಿ?" ಎಂದು ಜಗತ್ತು ಕೇಳಿದಾಗ ನಿಮ್ಮ ನಗರವನ್ನು ಮಾತ್ರ ಉಲ್ಲೇಖಿಸಬೇಡಿ. "ನಾನು ಭಾರತದಲ್ಲಿ ಕರ್ನಾಟಕದಿಂದ ಬಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿ ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಸಿ.ಯು.ಕೆಯಲ್ಲಿ ದೇಶದ ವಿವಿಧ ಮೂಲೆಯಿಂದ ಬಂದಿರುವ ಸುಮಾರು 3,000ಕ್ಕೂ ಹೆಚ್ಚಿನ ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷ 5 ವರ್ಷದ ಬಿ.ಎ.(ಎಲ್.ಎಲ್.ಬಿ) ಕೋರ್ಸ್ ಆರಂಭಿಸಲಾಗಿದೆ. ಹೊಸದಾಗಿ ಜಿನಿಟಿಕ್ಸ್ & ಜಿನೋಮ್ಸ್, ಲೈಬ್ರರಿ ಸೈನ್ಸ್, ಆರ್ಟಿಫಿಶಿಯಲ್ ಟೆಕ್ನಾಲಾಜಿ, ಮಶೀನ್ ಲರ್ನಿಂಗ್ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ಎನ್.ಇ.ಪಿ-20 ಅಳವಡಿಸಿಕೊಂಡಿರುವ ವಿ.ವಿ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಪ್ರಾಧ್ಯಾಪಕ ವೃಂದಕ್ಕೆ ನಿರಂತರ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಸಂಶೋಧನೆಯಲ್ಲಿ ಸುಮಾರು 15 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಅಣುಸಂಧಾನ್ ರಿಸರ್ಚ್ ಫೌಂಡೇಷನ್‌ದಿಂದಲೇ ಸಂಶೋಧನೆಗೆ 12.01 ಕೋಟಿ ರೂ. ವಿ.ವಿ.ಗೆ ಬಿಡುಗಡೆಯಾಗಿದೆ. ಒಟ್ಟಾರೆಯಾಗಿ ವಿ.ವಿ.ಯನ್ನು ಸಂಶೋಧನೆ, ನಾವೀನ್ಯತದ ಕೇಂದ್ರದ ಜೊತೆಗೆ ಜ್ಞಾನದ ಹಬ್ ಮಾಡುವ ಗುರಿ ಹೊಂದಲಾಗಿದೆ ಎಂದರು.

ಘಟಿಕೋತ್ಸವದ ಭಾಗವಾಗಿ ವಿವಿಧ 27 ವಿಭಾಗದ 737 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ, 18 ಅಭ್ಯರ್ಥಿಗಳಿಗೆ ಪಿ.ಎಚ್.ಡಿ, ಓರ್ವರಿಗೆ ಎಂ.ಫಿಲ್ ಪದವಿ ಸೇರಿದಂತೆ ಒಟ್ಟು 756 ಅಭ್ಯರ್ಥಿಗಳಿಗೆ ನ್ಯಾ. ದಿನೇಶ್‌ ಮಹೇಶ್ವರಿ ಅವರು ಪದವಿ ಪ್ರದಾನ ಮಾಡಿದರು.

ನಂದ್ಯಾಳ ಹುಡುಗಿಗೆ ಒಲಿದ ಪ್ರೊ.ಎ.ಎಂ.ಪಠಾನ್ ಗೋಲ್ಡ್ ಮೆಡಲ್:

ಆಂಧ್ರಪ್ರದೇಶದ ನಂದ್ಯಾಳ ಮೂಲದ ವಿದ್ಯಾರ್ಥಿನಿ ಶಿವಸಾಹಿತಿ ಸೋಮಶೆಟ್ಟಿ ಬಿ.ಇ.(ಇ&ಸಿ) ಕೋರ್ಸ್ ನಲ್ಲಿ ಪ್ರಥಮ ರ‍್ಯಾಂಕಿನ ಚಿನ್ನದ ಪದಕ ಪಡೆಯುವುದರ ಜೊತೆಗೆ ಪ್ರೊ.ಎ.ಎಂ.ಪಠಾನ್ ಗೋಲ್ಡ್ ಮೆಡಲ್ ಸಹ ಪಡೆದರು.

"ಶ್ರಮ ಪಟ್ಟಿದ್ದೆ, ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ಎರಡು ಗೋಲ್ಡ್ ಮೆಡಲ್ ಖುಷಿ ತಂದಿದೆ. ತಂದೆ-ತಾಯಿಯ ಸಹಕಾರದಿಂದಲೆ ಇದೆಲ್ಲ ಸಾಧ್ಯವಾಗಿದೆ. ಮದ್ರಾಸ್ ಐ.ಐ.ಟಿ.ಯಲ್ಲಿ ಸ್ನಾತಕೋತ್ತರ ಪದವಿ ಮಾಡುವ ಆಸೆ ಹೊಂದಿದ್ದೇನೆ ಎಂದು ವಿದ್ಯಾರ್ಥಿನಿ ಶಿವಸಾಹಿತಿ ಸೋಮಶೆಟ್ಟಿ ಚಿನ್ನದ ಪದಕ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.  

ನನಗೆ ಓದಕ್ಕೆ ಆಗಲಿಲ್ಲ, ಮಗಳ ಓದಿನಲ್ಲೆ ಖುಷಿ ಕಂಡಿರುವೆ ಎಂದು ನಂದ್ಯಾಳದಲ್ಲಿ ಕಿರಾಣಿ ಅಂಗಡಿ ನಡೆಸುವ ವಿದ್ಯಾರ್ಥಿನಿಯ ತಂದೆ ಯತೀಂದ್ರ ಬಾಬು ಮಗಳ ಸಾಧನೆ ಕುರಿತು ಹೇಳಿದರು. ತಾಯಿ ಜಾಹ್ನವಿ ಸಹ ಸಂತಸದ ಕ್ಷಣ ಕಣ್ತುಂಬಿಕೊಂಡರು.

ಹಣ್ಣು ಮಾರುವವನ ಮಗಳಿಗೆ ಒಲಿದ ಚಿನ್ನದ ಪದಕ:

ಜಿಲ್ಲೆಯ ಆಳಂದ ಬಸ್ ನಿಲ್ದಾಣ ಮುಂಭಾಗದಲ್ಲಿ ಹಣ್ಣು ಮಾರುವ ಬಂಡಿ ಇಟ್ಟು ಉಪ ಜೀವನ ನಡೆಸುತ್ತಿರುವ ಶಮ್ಮು ಭಾಗವಾನ್ ಪುತ್ರಿ ಸಾನಿಯಾ ಸಮ್ರೀನ್ ಎಂ.ಕಾಂ ನಲ್ಲಿ ಚಿನ್ನದ ಪದಕ ಪಡೆದು ಪಾಲಕರ ಖುಷಿಗೆ ಕಾರಣವಾದರು. ಪ್ರೌಢ ಶಿಕ್ಷಣ, ಪದವಿ ಆಳಂದನಲ್ಲಿಯೇ ಮಾಡಿರುವೆ. ಬಿಕಾಂ ಪದವಿಯಲ್ಲಿ ಬೆಸ್ಟ್ ಕಾಮರ್ಸ್ ವಿದ್ಯಾರ್ಥಿ ಅವಾರ್ಡ್ ಪಡೆದಿದ್ದೇ ಸಿ.ಯು.ಕೆ.ನಲ್ಲಿ ಪ್ರವೇಶ ಪಡೆಯಲು ಸ್ಫೂರ್ತಿದಾಯಕವಾಯಿತು. ಮುಂದೆ ಪ್ರೊಫೆಸರ್ ಆಗುವ ಆಸೆ ಹೊಂದಿದ್ದು, ಪಿ.ಎಚ್.ಡಿ. ಮಾಡುವೆ ಎಂದು ಸಾನಿಯಾ ಸಮ್ರೀನ್ ತಮ್ಮ ಅನಿಸಿಕೆ ಹಂಚಿಕೊಂಡರು.

ಘಟಿಕೋತ್ಸವದಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಕೋಟಾ ಸಾಯಿ ಕೃಷ್ಣ ಸೇರಿದಂತೆ ವಿವಿಧ ಕೋರ್ಟ್, ಕಾರ್ಯಕಾರಿ ಮಂಡಳಿ, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನ್‌ಗಳು, ಪ್ರಾದ್ಯಾಪಕ ವೃಂದ, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು. ಕುಲಸಚಿವ ಪ್ರೊ.ಎಸ್.ಎಸ್.ಬಿರಾದಾರ ವಂದಿಸಿದರು. ಡಾ.ರೋಹಿಣಾಕ್ಷಾ ಸಿರ್ಲಾರು, ಡಾ.ಅಂಕಿತ ಸತ್ಪತಿ, ಡಾ.ಸ್ವಪ್ನಿಲ್ ಚಾಪೇಕಾರ್ ಅವರು ನಿರೂಪಿಸಿದರು.




 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News