×
Ad

ಕಲಬುರಗಿ | ಜೈಲಿನಲ್ಲಿ ಜಾಮರ್ ಅಳವಡಿಕೆ : ಫ್ರಿಕ್ವೆನ್ಸಿ ಕಡಿಮೆ ಮಾಡುವಂತೆ ಗ್ರಾಮಸ್ಥರು ಒತ್ತಾಯ

Update: 2025-05-21 16:43 IST

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಕೆ ಮಾಡಲಾಗಿದ್ದು, ಇದರಿಂದಾಗಿ ಅಕ್ಕ ಪಕ್ಕದ ಗ್ರಾಮದ ಜನರಿಗೆ ತೀವ್ರ ಸಂಕಷ್ಟವಾಗುತ್ತಿದೆ. ಕೂಡಲೇ ಫ್ರಿಕ್ವೆನ್ಸಿ ಕಡಿಮೆ ಮಾಡಬೇಕೆಂದು ಜೈಲಿನ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಅವರಿಗೆ ನಂದಿಕೂರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ನೇತೃತ್ವದಲ್ಲಿ ಪಾಣೆಗಾಂವ, ಸೀತನೂರ ಮತ್ತು ನಂದಿಕೂರ ಗ್ರಾಮಸ್ಥರು ಸೇರಿಕೊಂಡು ಮನವಿ ಪತ್ರ ಸಲ್ಲಿಸಿ, ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕುಮಾರ್ ವಳಕೇರಿ, ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಬಾರದೆಂದು ಜಾಮರ್ ಅಳವಡಿಕೆ ಮಾಡಿದ್ದಾರೆ. ಆದರೆ ಇದರ ಶಿಕ್ಷೆ ಕೈದಿಗಳಿಗಿಂತ ಜನಸಾಮಾನ್ಯರಿಗೆ ಹೆಚ್ಚು ಆಗುತ್ತಿದೆ. ಜೈಲು ಸುತ್ತಲಿನ ಗ್ರಾಮಗಳಾದ ಪಾಣೇಗಾಂವ, ಸೀತನೂರ ಮತ್ತು ನಂದಿಕೂರ ಗ್ರಾಮಗಳ ಜನರು ತತ್ತರಿಸಿ ಹೋಗಿದ್ದಾರಲ್ಲದೆ, ಈ ಗ್ರಾಮಗಳ ಸಾರ್ವಜನಿಕರಿಗೆ ಮೊಬೈಲ್ ಕರೆಗಳು ಬರುವುದಿಲ್ಲ, ಕರೆ ಮಾಡುವ ಸಾಧ್ಯತೆಯೂ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.

ಜೈಲಿನ ಫ್ರಿಕ್ವೆನ್ಸಿ ತುಂಬಾ ಕಡಿಮೆ ಮಾಡಬೇಕು ಮತ್ತು ಅದರ ವ್ಯಾಪ್ತಿ ಕಡಿಮೆಗೊಳಿಸಿ ಜನರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮೇ 26ರಂದು ಮುಖ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಶಂಕರ್ ಕಾರ್ಬಾರಿ, ನಾಗೇಶ್ ಡಿ.ಮುಚಖೇಡ, ಶರಣಯ್ಯ ಸ್ವಾಮಿ ಸೀತನೂರ್, ಹುಸೇನ್ ಸಾಬ್ ಮೋಹಜನ್, ವೀರಯ್ಯ ಸ್ವಾಮಿ, ಕಲ್ಯಾಣರಾವ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News