×
Ad

"ಸತ್ಯಕ್ಕೆ ದೂರವಾದುದು": ತೂಕದಲ್ಲಿ ಮೋಸ ಆರೋಪದ ಕುರಿತು ಸಿದ್ಧಸಿರಿ ಕಾರ್ಖಾನೆ ಸ್ಪಷ್ಟನೆ

Update: 2025-12-16 22:46 IST

ಕಲಬುರಗಿ: ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದಲ್ಲಿ ಕಬ್ಬು ತೂಕದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಇದು ರಾಜಕೀಯ ಪ್ರೇರಿತ ಕುತಂತ್ರ ಎಂದು ಕಂಪೆನಿಯ ನಿರ್ದೇಶಕರಾದ ಪ್ರಭು ದೇಸಾಯಿ ಮತ್ತು ಜಗದೀಶ ಕ್ಷತ್ರಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಖಾನೆಯು ರೈತರೊಂದಿಗೆ ಪಾರದರ್ಶಕ ಮತ್ತು ಪ್ರಾಮಾಣಿಕ ವ್ಯವಹಾರ ನಡೆಸುತ್ತಿದೆ. ಆದರೆ ಕೆಲವರು ರಾಜಕೀಯ ದುರುದ್ದೇಶದಿಂದ ಮತ್ತು ಸಿದ್ಧಸಿರಿ ಸಮೂಹದ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರ ವರ್ಚಸ್ಸಿಗೆ ಧಕ್ಕೆ ತರುವ ಹತಾಶ ಪ್ರಯತ್ನವಾಗಿ ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಪ್ರವೀಣಕುಮಾರ್ ಕೋರಿ, ಬಸವರಾಜ ಕೋರಿ ಹಾಗೂ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಕಾರ್ಖಾನೆಯ ತೂಕದಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ನಿರ್ದೇಶಕರು, ಆರೋಪಿತರು ತೋರಿಸಿರುವ 'ಫ್ರೆಂಡ್ಸ್ ವೇ ಬ್ರಿಡ್ಜ್' ರಸೀದಿಯು ಶಹಾಬಾದ್‌ನದ್ದಾಗಿದೆ. ಅಲ್ಲಿ ಮಧ್ಯಾಹ್ನ 2:49ಕ್ಕೆ ತೂಕ ಮಾಡಿಸಿದ್ದರೆ, ಸಿದ್ಧಸಿರಿ ಕಾರ್ಖಾನೆಯಲ್ಲಿ ಅದೇ ದಿನ ರಾತ್ರಿ 9:47ಕ್ಕೆ ತೂಕವಾಗಿದೆ. ಕೇವಲ 70 ಕಿ.ಮೀ ದೂರ ಕ್ರಮಿಸಲು ಸುಮಾರು 7 ಗಂಟೆಗಳ ಕಾಲಾವಕಾಶ ತೆಗೆದುಕೊಂಡಿರುವುದು ಮತ್ತು ತನಿಖೆ ನಡೆಸಿದಾಗ ಸದರಿ ವಿಳಾಸದಲ್ಲಿ 'ಫ್ರೆಂಡ್ಸ್ ವೇ ಬ್ರಿಡ್ಜ್' ಅಸ್ತಿತ್ವದಲ್ಲಿಲ್ಲದಿರುವುದು ಈ ಆರೋಪಗಳು ಯೋಜಿತ ಸಂಚು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ತಿಳಿಸಿದ್ದಾರೆ.

ತೂಕದ ಯಂತ್ರದಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಡಿಸೆಂಬರ್ 14ರಂದು ಕಾನೂನು ಮಾಪನಶಾಸ್ತ್ರ ಇಲಾಖೆಯ (Legal Metrology Department) ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿದ್ದರು. ರೈತರ ಸಮ್ಮುಖದಲ್ಲೇ ಲಾರಿ ತೂಕ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕಾರ್ಖಾನೆಯ ತೂಕದ ಯಂತ್ರವು ಸರ್ಕಾರದ ಎಲ್ಲಾ ಮಾನದಂಡಗಳಿಗೆ ಅನುಗುಣವಾಗಿದೆ ಮತ್ತು ನಿಖರವಾಗಿದೆ ಎಂದು ದೃಢಪಡಿಸಿ ಪ್ರಮಾಣಪತ್ರ ನೀಡಿದ್ದಾರೆ. ಸಂಸ್ಥೆಯ ಮತ್ತು ಅಧ್ಯಕ್ಷರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವ್ಯಕ್ತಿಗಳು ಹಾಗೂ ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News