×
Ad

ಕಲಬುರಗಿ | ಇಂದಿರಾ ಕಿಟ್ ನಲ್ಲಿ ಪ್ರತಿ ಕುಟುಂಬಕ್ಕೆ 2 ಕೆಜಿ ತೊಗರಿ ಬೇಳೆ ವಿತರಣೆ : ಡಾ.ಶರಣಪ್ರಕಾಶ್ ಪಾಟೀಲ್

Update: 2025-10-11 21:55 IST

ಕಲಬುರಗಿ: ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿರುವ ಇಂದಿರಾ ಕಿಟ್ ನಲ್ಲಿ ರಾಜ್ಯದ ಪ್ರತಿ ಕುಟುಂಬಕ್ಕೆ 2 ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ಶರಣಪ್ರಕಾಶ್ ಪಾಟೀಲ್, ಈ ಹಿಂದೆ ನಮ್ಮ ಸರಕಾರ ಇದ್ದಾಗ ಒಂದು ಕೆಜಿ ತೊಗರಿ ಬೇಳೆ ನೀಡುತ್ತಿದ್ದೆವು. ಅಧಿಕಾರ ಮುಗಿದ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇದೀಗ ತೊಗರಿ ವಿತರಿಸುವ ಕಾಲ ಮತ್ತೆ ಕೂಡಿ ಬಂದಿದೆ. ಪ್ರತಿ ತಿಂಗಳು 1 ಕೋಟಿಗೂ ಹೆಚ್ಚು ಕುಟುಂಬದವರಿಗೆ ತೊಗರಿ ಬೇಳೆ ನೀಡುತ್ತಿರುವುದರಿಂದ ತೊಗರಿ ಬೆಳೆಯುವ ಈ ಭಾಗದ ರೈತರಿಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ ಎಂದರು.

ತೊಗರಿ ಬೇಳೆಯಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಇರುವುದರಿಂದ ದೈಹಿಕವಾಗಿ ಆರೋಗ್ಯ ಸದೃಢ ಇಟ್ಟುಕೊಳ್ಳಲು ಲಾಭವಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿರುವ ತೊಗರಿಯನ್ನು ನೇರವಾಗಿ ರೈತರಿಂದ ಖರೀದಿ ಮಾಡಲಾಗುತ್ತಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಬೆಲೆ ನಿಗದಿಪಡಿಸಿ, ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದರು.

ಬೀದರ್, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿಯಲ್ಲಿ ಬೆಳೆ ನಷ್ಟದ ಕುರಿತಾಗಿ ಈಗಾಗಲೇ ಶೇ.70ರಷ್ಟಕ್ಕೂ ಹೆಚ್ಚು ಸರ್ವೇ ಕಾರ್ಯ ನಡೆದಿದೆ. ಕಲಬುರಗಿ ಜಿಲ್ಲೆಯೊಂದಕ್ಕೆ 500 ಕೋಟಿಗೂ ಹೆಚ್ಚು ಪರಿಹಾರ ವಿಮೆ ಹಣ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಬರಗಾಲ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರಕಾರ ರೈತರ ರಕ್ಷಣೆಗೆ ಬದ್ದವಾಗಿದೆ. ಸಿಎಂ ಕೂಡ ಖುದ್ದಾಗಿ ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಹಸಿ ಬರಗಾಲ ಘೋಷಣೆ ಎನ್ ಡಿಆರ್ ಎಫ್ ಕಾಯ್ದೆಯಡಿ ಘೋಷಣೆ ಮಾಡಬೇಕು. ಅದನ್ನು ಪರಿಶೀಲಿಸಿ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News