×
Ad

ಅಫಜಲಪುರ | ಕಬ್ಬು ತುಂಬಿದ ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ : ತಪ್ಪಿದ ಭಾರೀ ಅನಾಹುತ

Update: 2025-12-31 18:42 IST

ಅಫಜಲಪುರ: ಅಫಜಲಪುರ–ಘತ್ತರಗಾ ಮುಖ್ಯ ರಸ್ತೆಯ ಪಟ್ಟಣದ ವಾರ್ಡ್ ನಂಬರ್ 21ರ ಲಿಂಬಿತೋಟ ಬಡಾವಣೆಯ ಶಾರದಾ ಕಲ್ಯಾಣ ಮಂಟಪದ ಎದುರು ಇರುವ ವಿದ್ಯುತ್ ಕಂಬಕ್ಕೆ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಸಂಭವಿಸುವ ವೇಳೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಾಹ ಹರಿಯುತ್ತಿತ್ತು. ವಿಷಯ ತಿಳಿದ ಕೂಡಲೇ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ದಿನನಿತ್ಯ ಡಬಲ್ ಟ್ರೈಲರ್‌ಗಳಲ್ಲಿ ಅಪಾಯ ಮೀರಿ ಕಬ್ಬು ತುಂಬಿಕೊಂಡು ಟ್ರಾಕ್ಟರ್‌ಗಳು ಇದೇ ಮಾರ್ಗವಾಗಿ ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆಗೆ ಸಂಚರಿಸುತ್ತಿವೆ. ಇದರಿಂದ ಬೈಕ್ ಸವಾರರು, ಪಾದಚಾರಿಗಳು ಹಾಗೂ ಸಣ್ಣ ವಾಹನ ಸವಾರರು ಜೀವಭಯದೊಂದಿಗೆ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಅಪಾಯಕಾರಿಯಾದ ಟ್ರಾಕ್ಟರ್ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News