×
Ad

ಮೈಕ್ರೋ ಫೈನಾನ್ಸ್ ಮುಖ್ಯಸ್ಥರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸಭೆ

Update: 2025-02-19 14:42 IST

ಕಲಬುರಗಿ: ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಸಾಲ ವಸೂಲಾತಿಗೆ ಬಡ ಜನರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲೆಂದು ರಾಜ್ಯ ಸರ್ಕಾರ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾಧ್ಯೇಶ-2025 ಕಳೆದ ಪೆಬ್ರವರಿ 12 ರಿಂದ ಜಾರಿಗೆ ಬಂದಿದ್ದು, ಇದನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ಕಿರುಕುಳ ನೀಡಿ ಸಾಲ ವಸೂಲಾತಿ ಮಾಡಿದಲ್ಲಿ 5 ಲಕ್ಷ ರೂ. ದಂಡ ಹಾಗೂ 10 ವರ್ಷ ಕಾರಾಗೃಹ ಶಿಕ್ಷೆಗೆ ಕಾರಣವಾಗಬೇಕಾಗುತ್ತದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಮೈಕ್ರೋ ಫೈನಾನ್ಸ್ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕುರಿತಂತೆ ಹೊರಡಿಸಲಾಗಿರುವ ಸುಗ್ರೀವಾಜ್ಞೆಯ ಅನುಷ್ಠಾನ ಕುರಿತಂತೆ ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಪೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿ ಹಾಗೂ ಲೇವಾದೇವಿ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಅಧ್ಯಾಧ್ಯೇಶ ಉಲ್ಲಂಘಿಸದೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಲವಂತದ ಸಾಲ ವಸೂಲಾತಿ ಮಾಡಬಾರದು ಎಂದರು.

ಸಾರ್ವಜನಿಕರಿಗೆ ಕಿರುಕುಳ ತಪ್ಪಿಸಲು, ಲೇವಾದೇವಿದಾರರು ಕಾನೂನು ಬದ್ಧವಾಗಿ ವ್ಯವಹಾರ ನಡೆಸಲು ಈ ಸುಗ್ರಿವಾಜ್ಞೆ ಜಾರಿಗೆ ತಂದಿದ್ದು, ಈ ಬಗ್ಗೆ ಗ್ರಾಮ, ಹೋಬಳಿ, ತಾಲೂಕು ಮಟ್ಟದಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕು. ವಿಸೇಷವಾಗಿ ಸಾಲ ವಸೂಲಿಗಾರರ ನಡವಳಿಕೆ ಮೇಲೆ ನಿಯಂತ್ರಣ ಸಾಧಿಸಬೇಕು ಎಂದ ಅವರ, ನಿಮ್ಮ ವ್ಯವಹಾರಗಳನ್ನು ಅಡ್ಡಿಪಡಿಸವುದು ನಮ್ಮ ಉದ್ದೇಶವಲ್ಲ, ಅದ ಕಾನುನು ಬದ್ಧವಾಗಿರಬೇಕು ಅಷ್ಟೆ ಎಂದರು.

ಮಾರ್ಚ್ 12ರ ವರೆಗೆ ನೋಂದಣಿಗೆ ಅವಕಾಶ:

ಅಧ್ಯಾಧ್ಯೇಶ ಜಾರಿಯಾದ ದಿನಾಂಕದಿಂದ 30 ದಿನದೊಳಗೆ ಮೈಕ್ರೋ ಪೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿ ಹಾಗೂ ಲೇವಾದೇವಿ ಸಂಸ್ಥೆಗಳು ನೋಂದಣಿ ಮಾಡಬೇಕಿರುವುದರಿಂದ ಮಾರ್ಚ್ 12 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಾಲದ ಬಡ್ಡಿ ದರ, ವಸೂಲಾತಿ ವ್ಯವಸ್ಥೆ ಮತ್ತು ಸಾಲ ವಸೂಲಾತಿಗೆ ಅಧಿಕೃತಗೊಳಿಸಿದ ವ್ಯಕ್ತಿ ಸೇರಿದಂತೆ ಇನ್ನಿತರ ವಿವರ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಸೂಚಿಸಿದ ಅವರು, ನೋಂದಣಿ ನಂತರ ಮಾಸಿಕ, ತ್ರೈಮಾಸಿಕ ವರದಿ ಸಹ ಸಲ್ಲಿಸಬೇಕಾಗುತ್ತದೆ ಎಂದರು.

ತೊಂದರೆ ಕೊಟ್ಟರೆ ಮುಲಾಜಿಲ್ಲದೆ ಕ್ರಮ:

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ನೂತನ ಅಧ್ಯಾಧ್ಯೇಶ ಉಲ್ಲಂಘಿಸಿ ಸಾಲ ವಸೂಲಾತಿಗೆ ಹೋದ ವ್ಯಕ್ತಿ ಸೇರಿದಂತೆ ಸಂಸ್ಥೆಯ ಎಲ್ಲರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸಾಲಗಾರರಿಗೆ ಬಡ್ಡಿ ದರ, ಈಗಾಗಲೆ ಪಾವತಿಯಾಗಿರುವುದು, ಬಾಕಿ ಇರುವ ಬಗ್ಗೆ ಕನ್ನಡ ಭಾಷೆಯಲ್ಲಿ ಮಾಹಿತಿ ಇರುವ ಲೋನ್ ಕಾರ್ಡ್ ವಿತರಿಸಬೇಕೆಂದು ಸೂಚಿಸಿದರು.

ರಾತ್ರಿ ಸಮಯದಲ್ಲಿ ವಸೂಲಾತಿಗೆ ಹೋಗುವಂತಿಲ್ಲ:

ಎಸ್.ಪಿ. ಅಡ್ಡೂರು ಶ್ರೀನಿವಾಸಲು ಮಾತನಾಡಿ, ಅಧ್ಯಾಧ್ಯೇಶದ ಪ್ರಕಾರ ಸಾಲ ವಸೂಲಿ ಮಾಡುವರು ಯಾವುದೇ ಕಾರಣಕ್ಕೂ ರಾತ್ರಿ ಹೊತ್ತಿನಲ್ಲಿ ಸಾರ್ವಜನಿಕರ ಮನೆಗಳಿಗೆ ಹೋಗುವಂತಿಲ್ಲ. ದಿನದ ಅವಧಿಯಲ್ಲಿ ಹೋಗಿ ವಸೂಲು ಮಾಡಬಹುದು. ಇನ್ನು ವಸೂಲಿ ಮಾಡುವರು ಉತ್ತಮ ನಡವಳಿಕೆ ಹೊಂದಿರಬೇಕು, ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರನ್ನು ಯಾವುದೇ ಕಾರಣಕ್ಕೂ ವಸೂಲಾತಿಗೆ ನೇಮಿಸಕೊಳ್ಳಬಾರದೆಂದು ಹಣಕಾಸು ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದ ಅವರು, ವಸೂಲಿ ಮಡಲು ಹೋಗುವಾಗ ಸಿಬ್ಬಂದಿಗಳು ಬಾಡಿ ಕ್ಯಾಮೆರಾ ಅಳವಡಿಸಿಕೊಂಡು ಹೋದಲ್ಲಿ ಅವರ ನಡವಳಿಕೆ ಪತ್ತೆ ಹಚ್ಚಬಹುದಾಗಿದೆ ಎಂದು ಸಲಹೆ ನೀಡಿದರು.

ಸಹಕಾರ ಇಲಾಖೆಯ ಉಪನಿಬಂಧಕ ಈಶ್ವರ ಪಾಟೀಲ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಪಾಟೀಲ ಅವರು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾಧ್ಯೇಶ-2025 ಕುರಿತು ವಿವರ ನೀಡಿದ ಅವರು, ನೊಂದ ವ್ಯಕ್ತಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ಅವಕಾಶವಿದೆ. ಯಾವುದೇ ಅಡಮಾನವಿಲ್ಲದ ಸಾಲ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲೆಯ ಮೈಕ್ರೋ ಫೈನಾನ್ಸ್ ಮುಖ್ಯಸ್ಥರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News