ಕಲಬುರಗಿ | ವಿದ್ಯೆ ಸಾಧಕನ ಸೊತ್ತು, ಸೋಮಾರಿಯ ಸ್ವತಲ್ಲ : ತಹಶೀಲ್ದಾರ್ ಮುಹಮ್ಮದ್ ಮೊಹಸಿನ್
ಕಲಬುರಗಿ : ವಿದ್ಯೆ ಸಾಧಕನ ಸೊತ್ತು, ಸೋಮಾರಿಯ ಸ್ವತಲ್ಲ. ಸತತ ಪ್ರಯತ್ನದಿಂದ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಕಮಲಾಪುರ ತಹಶೀಲ್ದಾರ್ ಮುಹಮ್ಮದ್ ಮೊಹಸಿನ್ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ನಲ್ಲಿರುವ ಮೌಂಟ್ ವೇವ್ ಪ್ರೌಢಶಾಲೆಯಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಹಮ್ಮಿಕೊಂಡ ಹತ್ತನೇ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಂಬಾಳೆ ಖ್ಯಾತಿಯ ಕಮಲಾಪುರದ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ಈ ಮೂಲಕ ಸಾರಿ ಹೇಳಿದ್ದಾರೆ. ಈಗಿನಿಂದಲೇ ಐಎಎಸ್ ಮತ್ತು ಕೆಎಎಸ್ ಆಗಲು ತಯಾರಿ ಮಾಡಬೇಕು. ಅಗತ್ಯ ಸಹಕಾರ ನೀಡಲು ನಾನು ಸಿದ್ದನಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಸಂಸ್ಥೆ ಅಧ್ಯಕ್ಷ ಶಾಂತಕುಮಾರ ಪುರದಾಳ, ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿದರು. ಅನಂತಕುಮಾರ್ ಪಾಟೀಲ್ ಸ್ವಾಗತಿಸಿದರು. ಮಲ್ಲಿನಾಥ ಅಂಬಲಗಿ ನಿರೂಪಿಸಿದರು, ದಾಸಿಮಯ್ಯ ವಡ್ಡನಕೇರಿ ವಂದಿಸಿದರು
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪದಾಧಿಕಾರಿ ಎಂ.ಎನ್.ಸುಗಂಧಿ, ಕಸಾಪ ತಾಲೂಕು ಗೌರವ ಕೋಶಾಧ್ಯಕ್ಷ ನಾಗಣ್ಣ ವಿಶ್ವಕಮ೯, ಮಹಾಗಾಂವ ಕ್ರಾಸ್ ಸರಕಾರಿ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗನ್ನಾಥ ಭಜಂತ್ರಿ, ಕಸಾಪ ಹಿಂದುಳಿದ ವರ್ಗದ ಪದಾಧಿಕಾರಿ ಸಂಜಯಕುಮಾರ್ ನಾಟಿಕರ್, ವೈಜನಾಥ್ ಜಮಾದಾರ, ಶಿಕ್ಷಕ ಪ್ರಸಾದ್ , ಶಿಕ್ಷಕಿ ಸಂತೋಷಿ, ಜ್ಯೋತಿ ಮೂಲಗೆ, ವಿಠ್ಠಲ್, ಶಿವಕುಮಾರ್ ಮೂಲಗೆ, ಕಿರಣ ಸೇರಿದಂತೆ ಇತರರು ಇದ್ದರು.