×
Ad

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅರ್ಹ ಮತದಾರರು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿ : ನೀಲಪ್ರಭಾ ಬಬಲಾದ

Update: 2025-10-21 20:39 IST

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಅರ್ಹ ಮತದಾರರು ನ.6 ರೊಳಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು ಎಂದು ಶಹಾಬಾದ್ ತಹಶೀಲ್ದಾರ್‌ ನೀಲಪ್ರಭಾ ಬಬಲಾದ ಹೇಳಿದರು.

ಶಹಾಬಾದ್ ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಗಂಗಮ್ಮ ಪ್ರೌಢಶಾಲೆ ಹಾಗೂ ಬಸಮ್ಮ ಕಾಲೇಜಿನಲ್ಲಿ ತಾಲೂಕಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾದ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಿಂದೆ ಹೆಸರಿದ್ದರು ಸಹ ಇದೀಗ ಪುನಃ ನಮೂನೆ-19ರಲ್ಲಿ ಅರ್ಜಿ ಸಲ್ಲಿಸಬೇಕು. ಶಿಕ್ಷಕರು ನಿಗದಿತ ದಿನಾಂಕದೊಳಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಸಬೇಕು. ಪ್ರೌಢ ಶಾಲೆಗಿಂತ ಕಡಿಮೆ ಇಲ್ಲದ ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಹೀಗಾಗಿ ಅರ್ಜಿಯೊಂದಿಗೆ ಶಾಲಾ ಸಂಸ್ಥೆಯಿಂದ ಅನುಬಂಧ-2ರಲ್ಲಿ ಪಡೆದ ಪ್ರಮಾಣ ಪತ್ರ ಲಗತ್ತಿಸಬೇಕು ಎಂದು ಮಾಹಿತಿ ನೀಡಿದರು.

ತರಬೇತಿದಾರ ಉದಯ ಮಾತನಾಡಿ, ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಶಿಕ್ಷಕರು ನ.6ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕಳೆದ 6 ವರ್ಷಗಳಲ್ಲಿ 3 ವರ್ಷ ಸೇವೆ ಸಲ್ಲಿಸಿದವರು ಮತದಾರರಾಗಲು ಅರ್ಹರಾಗಿದ್ದಾರೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ತಾಲೂಕು ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕು. ಎಲ್ಲ ಶಿಕ್ಷಕರು ನೋಂದಣಿಯಿಂದ ವಂಚಿತರಾಗದಂತೆ ಎಲ್ಲಮುಖ್ಯಗುರುಗಳು, ಪ್ರಾಂಶುಪಾಲರು ತಮ್ಮ ಶಾಲೆ, ಕಾಲೇಜುಗಳಲ್ಲಿರುವ ಅರ್ಹ ಮತದಾರ ಶಿಕ್ಷಕರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಸಬೇಕು ಎಂದರು.

ಗ್ರೇಡ್-2 ತಹಶೀಲ್ದಾರ್‌ ಗುರುರಾಜ ಸಂಗಾವಿ, ನಗರಸಭೆಯ ಪೌರಾಯುಕ್ತ ಡಾ.ಕೆ ಗುರಲಿಂಗಪ್ಪ , ತಾಪಂ ಇಓ ಮಲ್ಲಿನಾಥ ರಾವೂರ, ಪ್ರಾಂಶುಪಾಲರಾದ ಸುವರ್ಣಾ, ತಾಪಂ ಎ.ಡಿ ಈರಣ್ಣ ಸಾಥಖೇಡ್ ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News