ಕಲಬುರಗಿ | ವಿದ್ಯಾರ್ಥಿಗಳು ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು: ಪ್ರೊ.ಬಿ.ಎಸ್ ಮಾಲಿಪಾಟೀಲ
ಕಲಬುರಗಿ: ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ ಸಂಪಾದಿಸುವುದು ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸಿಕೊಳ್ಳಬಹುದು. ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅವಶ್ಯಕತೆ ಇದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ.ಎಸ್ ಮಾಲಿಪಾಟೀಲ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಕೆವಿಪಿ ದಣ್ಣೂರ ಪಿಯು ಕಾಲೇಜು, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಆನಂದ ಸಿದ್ದಮಣಿ ಕನ್ನಡ ನಾಡುನುಡಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ವಿಶೇಷ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಮ್ಮ ಭಾಗದಲ್ಲಿ ನಡೆಯಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಉಪಯುಕ್ತ ವಾದ ನನ್ನ ನೆಚ್ಚಿನ ಪುಸ್ತಕ, ಪ್ರಬಂಧ ಸ್ಪರ್ಧೆ, ಕನ್ನಡ ಸಾಹಿತ್ಯ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಗಳ ಕುರಿತು ಹಾಗೂ 25 ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕ ನೀಡಿರುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕಲ್ಯಾಣರಾವ್ ಶೀಲವಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಉತ್ತರ ಮತಕ್ಷೇತ್ರದ ಅಧ್ಯಕ್ಷರಾದ ಪ್ರಭುಲಿಂಗ ಮೂಲಗೆ ಹಾಗೂ ಪ್ರಾಚಾರ್ಯ ಚಂದ್ರಶೇಖರ ರೆಡ್ಡಿ, ಆಡಳಿತಾಧಿಕಾರಿ ಗೀತಾ ಪಾಟೀಲ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶರಣು ನಿರೂಪಣೆ ಮಾಡಿದರು. ಉಪನ್ಯಾಸಕಿ ಮಾಣಿಕಮ್ಮ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.