×
Ad

ಕಲಬುರಗಿ | ಹಾಸ್ಟೆಲ್ ವಿದ್ಯಾರ್ಥಿನಿ ಮೇಲೆ ವಾರ್ಡನ್‌ನಿಂದ ಹಲ್ಲೆ ಆರೋಪ : ರಾತ್ರೋರಾತ್ರಿ ಪ್ರತಿಭಟನೆ

Update: 2025-07-31 23:08 IST

ಕಲಬುರಗಿ: ಹಾಸ್ಟೆಲ್ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ಒಬ್ಬರು ಹಲ್ಲೆ ನಡೆಸಿರುವ ಘಟನೆಯ ಬೆನ್ನಲ್ಲೇ ವಸತಿ ನಿಲಯದ ವಿದ್ಯಾರ್ಥಿನಿಯರು ಗುರುವಾರ ರಾತ್ರೋ ರಾತ್ರಿ ಊಟ ಮಾಡದೆ, ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ನಗರದ ಹೈಕೋರ್ಟ್ ರಿಂಗ್ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಮತಿ ಇಂದಿರಾಗಾಂಧಿ ಮಹಿಳಾ ನರ್ಸಿಂಗ್ ವಸತಿ ನಿಲಯದ ವಿದ್ಯಾರ್ಥಿನಿಗೆ ಹಾಸ್ಟೆಲ್ ವಾರ್ಡನ್ ಅರ್ಚನಾ ಎಂಬಾತರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಾರ್ಡನ್ ಅವರ ಹಲ್ಲೆ ಖಂಡಿಸಿ ಹಾಗೂ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ವಿದ್ಯಾರ್ಥಿನಿಯರು ನಿಲಯದ ಮುಂದೆ ಧರಣಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅಲ್ಲಿನ ವಿದ್ಯಾರ್ಥಿನಿ ದೇವಮ್ಮ, ಊಟ ಸರಿಯಾಗಿ ನೀಡುತ್ತಿಲ್ಲ, ಉತ್ತಮ ಗುಣಮಟ್ಟದ ಆಹಾರ ನೀಡಿ ಎಂದು ಪ್ರಶ್ನಿಸಿದ್ದೆವು. ಅದಕ್ಕೆ ವಾರ್ಡನ್ ಅವರು ಕಪಾಳಮೋಕ್ಷ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ದೂರದ ಊರಿನಿಂದ ಬಂದಿರುವ ನಮಗೆ ಸರ್ಕಾರ ನೀಡುತ್ತಿರುವ ಸೌಲಭ್ಯದ ಬಗ್ಗೆ ಪ್ರಶ್ನೆ ಮಾಡಬಾರದಾ? ಎಂದು ಹೇಳಿದರು.

ಇನ್ನೋರ್ವ ವಿದ್ಯಾರ್ಥಿನಿ ಭಾಗ್ಯಶ್ರೀ ಮಾತನಾಡಿ, ಊಟದ ಪಲ್ಯದಲ್ಲಿ ಹುಳಗಳು ಬಿದ್ದಿರುತ್ತವೆ. ಅಂತಹ ಪದಾರ್ಥಗಳನ್ನೇ ನಮಗೆ ಊಟಕ್ಕೆ ಬಡಿಸುತ್ತಾರೆ. ಮೂರು ತಿಂಗಳು ಕಳೆದರೂ ನೀರಿನ ಟ್ಯಾಂಕ್ ಸ್ವಚ್ಛತೆ ಮಾಡಿಲ್ಲ. ಏನಾದರೂ ಪ್ರಶ್ನಿಸಿದರೆ ನೀವ್ಯಾರು ಹೇಳುವವರು ಎಂದು ಹಾಸ್ಟೆಲ್ ವಾರ್ಡನ್ ಅವರು ನಮನ್ನು ಹೆದರಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಾಸ್ಟೆಲ್ ಗೆ ಮೂಲಭೂತ ಸೌಕರ್ಯಗಳಾದ, ಬೆಡ್, ಕುಡಿಯುವ ನೀರು, ಸಿಸಿ ಟಿವಿ ಕ್ಯಾಮರಾ, ಭದ್ರತಾ ಸಿಬ್ಬಂದಿ, ಹಾಸ್ಟೆಲ್ ಸುತ್ತಲೂ ಸ್ವಚ್ಛತೆ ಮಾಡಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಈಡೇರಿಸಬೇಕೆಂದು ವಿದ್ಯಾರ್ಥಿನಿಯರು ಈ ವೇಳೆ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ, ತಾಲ್ಲೂಕು ಅಧಿಕಾರಿಗಳು ಸೇರಿದಂತೆ ಮತ್ತಿತರರು ಭೇಟಿ ನೀಡಿ, ಹಾಸ್ಟೆಲ್ ಸ್ಥಿತಿಗತಿ ಪರಿಶೀಲಿಸಿದರು.

ಹಲ್ಲೆ ಖಂಡಿಸಿ, ವಿದ್ಯಾರ್ಥಿನಿಯರು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಅನೇಕ ಸಮಸ್ಯೆಗಳಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಕೂಡಲೇ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಬೇಕು. ವಾರ್ಡನ್ ಅರ್ಚನಾ ಅವರನ್ನು ಕೆಲಸದಿಂದ ವಜಾಗೊಳಿಸಬೇಕು.

-ಸರ್ವೇಶ್ (ಎಸ್ಎಫ್ಐ, ಕಲಬುರಗಿ ಜಿಲ್ಲಾಧ್ಯಕ್ಷ)

ನೀರು, ಶುಚಿ, ಟ್ಯಾಂಕ್ ಕ್ಲಿನ್, ಹಾಸ್ಟೆಲ್ ಸುತ್ತಲೂ ಸ್ವಚ್ಛತೆ ಇಲ್ಲ, ಹೀಗೆ ಅನೇಕ ಸಮಸ್ಯೆಗಳಿವೆ. ಅವರ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆ. ಸಿ ಹಾಸ್ಟೆಲ್ ವಾರ್ಡನ್ ವಜಾ ಕುರಿತು ಮೇಲಧಿಕಾರಿಗಳ ಅವರಿಗೆ ತಿಳಿಸಿ, ಕ್ರಮ ಕೈಗೊಳ್ಳಲಾಗುವುದು.

-ಶರಣು ಪಾಟೀಲ್ ( ತಾಲೂಕು ಬಿಸಿಎಂ ಅಧಿಕಾರಿ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News