×
Ad

ಕಲಬುರಗಿ: ಪತ್ನಿಯನ್ನು ಕೊಂದು ಮೃತದೇಹವನ್ನು ಕಬ್ಬಿನ ಹೊಲದಲ್ಲಿ ಹೂತಿದ್ದ ಪತಿ; ಆರೋಪಿ ಬಂಧನ

Update: 2025-11-05 13:27 IST

ಮೃತ ಮಹಿಳೆ ಮಶಾಕ್ ಬೀ

ಕಲಬುರಗಿ:  ಪತ್ನಿಯನ್ನು ಸೀರೆಯಿಂದ ಕತ್ತುಹಿಸುಕಿ ಕೊಲೆಗೈದು ಆಕೆಯ ಮೃತದೇಹವನ್ನು ಕಬ್ಬಿನ ಹೊಲದಲ್ಲಿ ಹೂತಿಟ್ಟ ಘಟನೆ ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಭೂಸನೂರು ಗ್ರಾಮದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಆಳಂದ ತಾಲ್ಲೂಕಿನ ಕೊರಳ್ಳಿ ಗ್ರಾಮದ ನಿವಾಸಿಯಾಗಿರುವ ಮಶಾಕ್ ಬೀ (38) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯ ಗಂಡ ಲಾಲಸಾಬ್‌ ಅಬ್ದುಲ್ ಸಾಬ್ ಗೌಂಡಿ ಎಂಬಾತನೇ ಹೆಂಡತಿಯನ್ನು ಹತ್ಯೆಗೈದು ಹೂತು ಹಾಕಿರುವ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆ:

ಮಶಾಕ್ ಬೀ (38) ಕೊಲೆಯಾದ ಮಹಿಳೆ. ಈಕೆಯ ಪತಿ ಲಾಲಸಾಬ್‌ ಅಬ್ದುಲ್ ಸಾಬ್ ಗೌಂಡಿ (46) ಹತ್ಯೆಗೈದ ಆರೋಪಿ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಭೂಸನೂರು ಗ್ರಾಮದ ಸಮೀಪದಲ್ಲಿ 20 ಎಕರೆ ಜಮೀನನ್ನು ಗುತ್ತಿಗೆ ಪಡೆದ ಲಾಲಸಾಬ್‌ ಹಲವು ವರ್ಷದಿಂದ ಕೃಷಿ ಚಟುವಟಿಕೆ ಮಾಡುತ್ತಿದ್ದು, ಕೃಷಿ ಚಟುವಟಿಕೆಯ ಅನುಕೂಲಕ್ಕಾಗಿ ತೋಟದಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದರು.

ಅದೇ ಗ್ರಾಮದ ಮಹಿಳೆಯೊಂದಿಗೆ ಲಾಲಸಾಬ್‌ ಅನೈತಿಕ ಸಂಬಂಧ ಹೊಂದಿದ್ದ. ಈ ಕಾರಣಕ್ಕಾಗಿಯೇ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಅ.31ರಂದು ಮತ್ತೆ ಜಗಳ ನಡೆದಿದ್ದು, ಕೋಪದಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ಆಕೆಯ ಸೀರೆಯಿಂದಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೈದ ಬಳಿಕ ಯಾರಿಗೂ ತಿಳಿಯದಂತೆ ಮೃತದೇಹವನ್ನು ಹೊಲದಲ್ಲಿ ಹೂತಿದ್ದ. ಬಳಿಕ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಈತ ಪೊಲೀಸ್ ಠಾಣೆಗೂ ದೂರು ನೀಡಿದ್ದ ಎನ್ನಲಾಗಿದೆ.

ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮೃತ ಮಹಿಳೆಯ ಕುಟುಂಬಸ್ಥರು  ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರ ಕ್ಷೀಪ್ರ ತನಿಖೆಯಿಂದ ಮಹಿಳೆಯ ಕೊಲೆಗೆ ಗಂಡನೇ ಆರೋಪಿ ಎಂದು ಗೊತ್ತಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ,  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‌ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಇಂದುಮತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News