ಕಲಬುರಗಿ | ಸಿಜೆಐ ಅವರಿಗೆ ಶೂ ಎಸೆಯುವಂತಹ ವಕೀಲನ ಕೃತ್ಯ ಹೇಡಿತನ : ಆರ್.ಜಿ.ಶೇಟಕಾರ್
ಕಲಬುರಗಿ: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಪ್ರಕರಣವನ್ನು ಖಂಡಿಸುತ್ತೇವೆ ಎಂದು ರಾಷ್ಟ್ರೀಯ ಬಸವದಳ ಕಲಬುರಗಿ ಅಧ್ಯಕ್ಷ ಆರ್.ಜಿ. ಶೇಟಕಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಜೆಐ ಅವರಿಗೆ ಶೂ ಎಸೆಯುವಂತಹ ವಕೀಲನ ಕೃತ್ಯ ಹೇಡಿತನದ ಲಕ್ಷಣವಾಗಿದೆ, ನ್ಯಾಯ ಕೊಡುವ ನ್ಯಾಯಾಧೀಶರೇ ಆರೋಪಿಗಳಾದರೆ ದೀನ, ದಲಿತ, ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದವರಿಗೆ ಯಾವ ರೀತಿಯ ನ್ಯಾಯ ಕೊಡಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲ ಎನಿಸಿಕೊಂಡವರು ಇಂತಹ ಕೃತ್ಯ ಮಾಡಿರುವುದು ದೊಡ್ಡ ಅಪರಾಧ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಬ್ಬ ಹೊಂಬುತನದ ರಾಜಕಾರಣಿ, ಬಸವಣ್ಣನವರ ಬಗ್ಗೆ ಮತ್ತೊಮ್ಮೆ ಮಾತನಾಡಿದರೆ ಅವರಿಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿಷೇಧಿಸಲು ಆಗ್ರಹಿಸಲಾಗುತ್ತದೆ. 900 ವರ್ಷಗಳ ಹಿಂದೆನೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ, ಅಂತಹ ಮಹಾನ್ ವ್ಯಕ್ತಿ ವಿರುದ್ಧ ಹೇಳಿಕೆ ನೀಡುವುದನ್ನು ಯತ್ನಾಳ್ ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸಿಎಂ ಸಿದ್ದರಾಮಯ್ಯ ಅವರನ್ನು ನೂರಾರು ಸ್ವಾಮೀಜಿಗಳ ನೇತೃತ್ವದಲ್ಲಿ ಕೃತಜ್ಞತೆ ಸಲ್ಲಿಸಲಾಗಿದೆ ಎಂದರು.