ಕಲಬುರಗಿ | ಸಾಹಿತ್ಯದ ಒಡನಾಟವೇ ನಮ್ಮನ್ನು ಮಾನವರನ್ನಾಗಿಸುತ್ತದೆ : ಸಾಹಿತಿ ಕೆ.ನೀಲಾ
ನಂದಗೂರಿನ ಮಕ್ಕಳಿಂದ 'ಸಾಹಿತಿಗಳೊಂದಿಗೆ ಸಂವಾದ'
ಕಲಬುರಗಿ: "ಸಾಹಿತ್ಯ ಎನ್ನುವುದು ವ್ಯಕ್ತಿಗೆ ಚೇತೋಹಾರಿಯಾದದ್ದು. ಸಾಹಿತ್ಯದ ಒಡನಾಟವೇ ನಮ್ಮನ್ನು ಪರಿಪೂರ್ಣ ಮಾನವರನ್ನಾಗಿಸುತ್ತದೆ," ಎಂದು ಹಿರಿಯ ಸಾಹಿತಿ ಹಾಗೂ ಹೋರಾಟಗಾರ್ತಿ ಕೆ. ನೀಲಾ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಗಡಿ ಗ್ರಾಮ ನಂದಗೂರಿನ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕಲಬುರಗಿ ಆಕಾಶವಾಣಿಯಲ್ಲಿ 'ಬಾಲಲೋಕ' ಕಾರ್ಯಕ್ರಮ ನೀಡಲು ಆಗಮಿಸಿದ್ದ ಸಂದರ್ಭದಲ್ಲಿ, ಕೆ. ನೀಲಾ ಅವರ 'ಓದು ಮನೆ' ಗ್ರಂಥಾಲಯಕ್ಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಸಾಹಿತ್ಯದ ಕುರಿತು ಸಂವಾದ ನಡೆಸಿದರು.
ನೀವೇಕೆ ಬರೆಯುತ್ತೀರಿ? ಬರೆಯುವುದರಿಂದ ನಿಮಗೇನು ಲಾಭ?" ಎಂದು ವಿದ್ಯಾರ್ಥಿನಿ ಶ್ವೇತಾ ಪೂಜಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನೀಲಾ ಅವರು, "ನನ್ನೊಳಗಿನ ಅನುಭವಗಳನ್ನು ಹೊರಹಾಕಲು ಬರೆಯುತ್ತೇನೆ. ಬರವಣಿಗೆಯಿಂದ ಸಮಾಜದಲ್ಲಿ ಸ್ವಾಭಿಮಾನ ಹಾಗೂ ಘನತೆಯಿಂದ ಬದುಕಲು ಸಾಧ್ಯವಾಗಿದೆ. ಸಾಹಿತ್ಯವು ವ್ಯಕ್ತಿಯಲ್ಲಿ ಆತ್ಮಬಲ ತುಂಬುವುದಲ್ಲದೆ, ತನ್ನ ಸುತ್ತಲಿನ ಪರಿಸರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ," ಎಂದು ವಿವರಿಸಿದರು.
ಈಗಾಗಲೇ ಬರವಣಿಗೆಯಲ್ಲಿ ತೊಡಗಿರುವ ಪ್ರಜ್ಞಾ, ಸ್ನೇಹಾ, ಶ್ವೇತಾ ಹಾಗೂ ಸ್ಫೂರ್ತಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬರಹಕ್ಕೆ ಆಯ್ದುಕೊಳ್ಳಬೇಕಾದ ಸಂಗತಿಗಳು, ಪಾತ್ರಗಳ ಸೃಷ್ಟಿ, ಕಾಲ್ಪನಿಕತೆ ಹಾಗೂ ಭಾಷಾ ಬಳಕೆಯ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. "ಅರಿಸ್ಟಾಟಲ್, ಕುವೆಂಪು, ರವೀಂದ್ರನಾಥ ಟ್ಯಾಗೋರ್ ಅಂತಹವರು ಸಾಹಿತ್ಯದ ಸವಿಜೇನನ್ನು ಜಗತ್ತಿಗೆ ಹಂಚಿದವರು. ನಾವು ಸಹ ಆ ಸವಿಯನ್ನು ಸವಿಯಬೇಕು," ಎಂದು ಕಿವಿಮಾತು ಹೇಳಿದರು.
ನಂದಗೂರಿನ ಮಕ್ಕಳು ತಮ್ಮ ಶಾಲಾ ಗ್ರಂಥಾಲಯದ ಪುಸ್ತಕಗಳನ್ನು ಓದಿ 400ಕ್ಕೂ ಹೆಚ್ಚು ಟಿಪ್ಪಣಿಗಳನ್ನು ಬರೆದಿರುವುದನ್ನು ಕೇಳಿ ನೀಲಾ ಅವರು ಮಕ್ಕಳನ್ನು ಅಭಿನಂದಿಸಿದರು. ಈ ಹಿಂದೆ ಇದೇ ಶಾಲೆಯ ಮಕ್ಕಳು 600 ಕವನ ಮತ್ತು 54 ಕಥೆಗಳನ್ನೊಳಗೊಂಡ 'ಅಂಕುರ' ಎಂಬ ಸಂಕಲನ ಪ್ರಕಟಿಸಿದ್ದನ್ನು ಅವರು ಇದೇ ವೇಳೆ ಸ್ಮರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಉಪಾಧ್ಯಾಯ ರವೀಂದ್ರ ರುದ್ರವಾಡಿ, ಎಸ್‌ಡಿಎಮ್‌ಸಿ ಮಾಜಿ ಅಧ್ಯಕ್ಷ ಸಿದ್ದಲಿಂಗ ಬೆಡ್ದೂರ್ಗೆ, ಆಶಾ ಕಾರ್ಯಕರ್ತೆ ಮಲ್ಲಮ್ಮ ಸಂಗಮೇಶ ಬೆಡ್ದೂರ್ಗೆ ಹಾಗೂ ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ ಉಪಸ್ಥಿತರಿದ್ದರು.