×
Ad

ಕಲಬುರಗಿ | ಮಾ.8 ರಂದು ರಾಷ್ಟ್ರೀಯ ಲೋಕ್ ಅದಾಲತ್: ನ್ಯಾ.ಎ.ವ್ಹಿ.ಶ್ರೀನಾಥ

Update: 2025-02-28 20:28 IST

ಕಲಬುರಗಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಾ.8 ರಂದು ಕಲಬುರಗಿ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕು ಹಂತದ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕಾ ಅದಲಾತ್ ನಡೆಯಲಿದ್ದು, ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಪ್ರಭಾರಿ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎ.ವ್ಹಿ.ಶ್ರೀನಾಥ ಹೇಳಿದರು.

ಶುಕ್ರವಾರ ಇಲ್ಲಿನ ಕೋರ್ಟ್ ಕಾಂಪ್ಲೆಕ್ಸ್ ಆವರಣದಲ್ಲಿರುವ ಎ.ಡಿ.ಆರ್. ಕಟ್ಟಡದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು, ಕಲಬುರಗಿ ಜಿಲ್ಲಾ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಇದ್ದು, ಜನತಾ ಅದಾಲತ್ ಮೂಲಕ ರಾಜೀ ಸಂಧಾನದಿಂದ ಗರಿಷ್ಠ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದರು.

ಲೋಕ ಅದಾಲತ್‌ನಲ್ಲಿ ಸಿವ್ಹಿಲ್ ವ್ಯಾಜ್ಯಗಳು, ರಾಜೀಯಾಗಬಹುದಾದ ಕ್ರಿಮಿನಲ್ ಪ್ರಕರಣಗಳನ್ನು, ಚೆಕ್ ಅಮಾನ್ಯ ಪ್ರಕರಣಗಳನ್ನು, ಬ್ಯಾಂಕ್ ವಸೂಲಿ ಪ್ರಕರಣಗಳನ್ನು, ಮೋಟಾರು ವಾಹನ ಅಪಘಾತ ಪರಿಹಾರ ಕೇಳಿದ ಪ್ರಕರಣಗಳನ್ನು, ಕಾರ್ಮಿಕ ವ್ಯಾಜ್ಯಗಳನ್ನು, ಕೌಟುಂಬಿಕ ನ್ಯಾಯಾಲಯದಲ್ಲಿನ ಕೆಲವು ಪ್ರಕರಣಗಳನ್ನು ಮತ್ತು ಅಮಲ್‌ಜಾರಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಕಕ್ಷಿದಾರರು ಮತ್ತು ನ್ಯಾಯವಾದಿಗಳು ಇದರ ಲಾಭ ಪಡೆಯಬೇಕೆಂದು ಮನವಿ ಮಾಡಿಕೊಂಡರು.

ಜನತಾ ನ್ಯಾಯಾಲಯದಲ್ಲಿ ಕೊಡುವ ತೀರ್ಪು ನ್ಯಾಯಾಲಯದಲ್ಲಿ ಕೊಡುವ ತೀರ್ಪಿನಷ್ಟೆ ಪರಿಣಾಮಕಾರಿಯಾಗಿರುತ್ತದೆ. ಯಾವುದೇ ಮೇಲ್ಮನವಿ ಅಥವಾ ಖರ್ಚು ವೆಚ್ಚ ಇರುವುದಿಲ್ಲ. ಜನತಾ ನ್ಯಾಯಾಲಯದಲ್ಲಿ ವಕೀಲರ ಮುಖಾಂತರ ಅಥವಾ ನೇರವಾಗಿ ಕಕ್ಷಿದಾರರೇ ಭಾಗವಹಿಸಬಹುದಾಗಿದೆ. ಸೌಹಾರ್ದಯುತವಾಗಿ ಪ್ರಕರಣಗಳನ್ನು ಇತ್ಯರ್ಥಗೊಳ್ಳುವುದರಿಂದ ಪರಸ್ಪರ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಸಹಕರಿಯಾಗಲಿದೆ ಎಂದು ನ್ಯಾಯಾಧೀಶರು, ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳಿಗೆ ಮೇಲ್ಮನವಿಗೆ ಹೋಗಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಇದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News