×
Ad

ಅಂಬಿಗರ ಚೌಡಯ್ಯ ಮೂರ್ತಿ ವಿರೂಪ ಪ್ರಕರಣವನ್ನು ಮುಸ್ಲಿಮರ ತಲೆಗೆ ಕಟ್ಟಲು ಬಿಜೆಪಿ ಮುಖಂಡರ ಷಡ್ಯಂತ್ರ: ಭೀಮಣ್ಣ ಸಾಲಿ ಆರೋಪ

Update: 2025-10-18 20:00 IST

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ವಿರೂಪ ಪ್ರಕರಣದಲ್ಲಿ ಮುಸ್ಲಿಮರನ್ನು ಆರೋಪಿತರನ್ನಾಗಿಸಿ, ಹಿಂದೂ - ಮುಸ್ಲಿಮರ ಮಧ್ಯೆ ಗಲಭೆ ಸೃಷ್ಟಿಸುವ ಸಂಚು ಬಿಜೆಪಿ ಮುಖಂಡರಿಬ್ಬರು ರೂಪಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಭೀಮಣ್ಣ ಸಾಲಿ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೌಡಯ್ಯನವರ ಮೂರ್ತಿಗೆ ಅಪಮಾನ ಮಾಡಿರುವ ಪ್ರಕರಣದಲ್ಲಿ ಎರಡು ಸಮುದಾಯಗಳ ನಡುವೆ ಗಲಭೆ ಸೃಷ್ಟಿಸುವ ಹುನ್ನಾರ ನಡೆದಿತ್ತು. ಆದರೆ ಪೊಲೀಸರು ತಮ್ಮ ಶ್ರಮದಿಂದ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ನಮ್ಮದೇ ಕೋಲಿ ಸಮುದಾಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಯಾರೇ ಆಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಬಂಧಿತ ಆರೋಪಿ ಶಿವರಾಜ್ ಎನ್ನುವವರು ಕೋಲಿ ಸಮುದಾಯದ ಮುಖಂಡ ಹಾಗೂ ಬಿಜೆಪಿಯ ಕಾರ್ಯಕರ್ತ. ಆತನೇ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ವಿರೂಪಗೊಳಿಸಿದ್ದಾನೆ. ಬಳಿಕ ಬೆಳ್ಳಂ ಬೆಳಗ್ಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಎಂಬಾತರಿಗೆ ಕರೆ ಮಾಡಿದ್ದಾನೆ. ಆರೋಪಿ ಬಿಜೆಪಿ ಕಾರ್ಯಕರ್ತನಾಗಿರುವುದರಿಂದ ಅವನ ಪರವಾಗಿ ಮಣಿಕಂಠ ರಾಠೋಡ್ ಹಾಗೂ ಅವ್ವಣ್ಣಾ ಮ್ಯಾಕೇರಿ ಮತ್ತಿತ್ತರ ಬಿಜೆಪಿಗರು ನಿಂತಿದ್ದಾರೆ. ಹಾಗಾಗಿ ಈ ಪ್ರಕರಣದಲ್ಲಿ ಬಿಜೆಪಿ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಇಬ್ಬರು ಬಿಜೆಪಿ ಮುಖಂಡರು ಮೂರ್ತಿ ಭಗ್ನಗೊಳಿಸಿದ ಆರೋಪಿ ಪರವಾಗಿ ಇರುವುದನ್ನು ನೋಡಿದರೆ ಗಲಭೆ ನಡೆಸುವ ಷಡ್ಯಂತ್ರ ನಡೆಸಿದ್ದಾರೆ. ಇದರಲ್ಲಿ ಕೋಲಿ ಸಮಾಜದ ರಾಜಕೀಯ ಮುಖಂಡ ಆರೋಪಿಗಳ ಸಮರ್ಥನೆಗೆ ಮುಂದಾಗಿ ಪೊಲೀಸರ ವಿರುದ್ಧವೇ ಹೇಳಿಕೆ ನೀಡಿರುವುದು ಗಮನಿಸಿದರೆ ಅವರಿಗೆ ಅಂಬಿಗರ ಚೌಡಯ್ಯ ಮತ್ತು ಸಮಾಜಕ್ಕಿಂತ ರಾಜಕಾರಣವೇ ಮುಖ್ಯ ಎಂದು ತೋರಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಘಟನೆ ನಡೆದಿದ್ದಕ್ಕೆ ಅವರನ್ನೇ ಗುರಿ ಮಾಡುವುದು ಸರಿಯಲ್ಲ. ಸಮಾಜದಲ್ಲಿ ಯಾವುದೇ ಪ್ರಕರಣ ನಡೆದರೂ ರಾಜಕೀಯ ಮಾಡಬಾರದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುನಾಥ್ ಗುದಗಲ್, ದೇವಿಂದ್ರ ಕಾರಳ್ಳಿ, ಸಾಯಿಬಣ್ಣ, ರಾಮಲಿಂಗ, ಶಿವಾನಂದ ಹೊನಗುಂಟಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News