ಕಲಬುರಗಿ | ನೈಸರ್ಗಿಕ ಸಂಪತ್ತು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ : ಪ್ರೊ.ಈ.ಟಿ.ಪುಟ್ಟಯ್ಯ
ಕಲಬುರಗಿ : ಸಮಾಜ ಸುಧಾರಕರರಾಗಿ ಮತ್ತು ಸಮಾಜದ ಒಳಿತಿಗಾಗಿ ಬದುಕಿದವರು 18ನೇ ಶತಮಾನದ ಶ್ರೇಷ್ಠ ಸಂತ ಶ್ರೀ ಸೇವಾಲಾಲ್ ಮಹಾರಾಜರು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂತರು ಸಮಾಜ ಸುಧಾರಕರರಾಗಿ ಮತ್ತು ಸಮಾಜದ ಒಳಿತಿಗಾಗಿ ಬದುಕಿದವರು ಮತ್ತು ಮೂಢನಂಬಿಕೆ ವಿರೋಧಿಸಿ ವೈಚಾರಿಕತೆ ಬೋಧಿಸಿದರು. ಸುಳ್ಳು ಹೇಳಬಾರದು ಕಳ್ಳತನ ಮಾಡಬಾರದು. ಸತ್ಯ ಮತ್ತು ಪ್ರಾಮಾಣಿಕತೆಯಿಂದ ಜೀವನ ಮಾಡಿದವರು ಸಂತ ಸೇವಾಲಾಲ್ ಮಹಾರಾಜರು ಎಂದು ಹೇಳಿದರು.
ಸಂತರು ಅರಣ್ಯದಲ್ಲಿ ಜೀವನ ಮಾಡಿದವರು ಆದ್ದರಿಂದ ಅವರಿಗೆ ಅರಣ್ಯದಲ್ಲಿ ಗಿಡಮೂಲಿಕೆಗಳು ಮಾಹಿತಿ ಇತ್ತು. ಆ ಗಿಡಮೂಲಿಕೆಗಳಿಂದ ಜನರ ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದರು. ಆದ್ದರಿಂದ ಸಂತ ಸೇವಾಲಾಲ್ ಮಹಾರಾಜರ ಕುರಿತು ಇನ್ನು ಆಳವಾದ ಅಧ್ಯಯನವಾದರೆ ಅವರ ಗಿಡಮೂಲಿಕೆಯ ಜ್ಞಾನ ಪ್ರಸ್ತುತ ವೈದ್ಯಲೋಕಕ್ಕೆ ಸಹಾಯವಾಗಬಹುದು ಎಂದರು.
ಪ್ರಾಣಿ ಪ್ರಕೃತಿ ಮನುಷ್ಯ ಅವಿನಾಭಾವ ಸಂಬಂಧ ಹೊಂದಿರುತ್ತವೆ. ನೈಸರ್ಗಿಕ ಸಂಪತ್ತು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಂತರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಗೂರು ಶ್ರೀರಾಮುಲು ಮಾತನಾಡಿ, ಸಂತರು ಬಂಜಾರ ಸಮಾಜಕ್ಕೆ ನಾಯಕ ಮತ್ತು ಆದರ್ಶ ಪುರುಷರಾಗಿದ್ದಾರೆ. ಜನಾಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಮತ್ತು ಪ್ರಾಮಾಣಿಕತೆ ಮತ್ತು ಸರಳತೆ ಅಳವಡಿಸಿಕೊಂಡು ಬದುಕಿದವರು ಸಂತ ಸೇವಾಲಾಲ್ ಮಹಾರಾಜರು ಎಂದರು.
ಕಾರ್ಯಕ್ರಮ ಪ್ರಾಸ್ತಾವಿಕವಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ದಶರಥ ನಾಯ್ಕ ಮಾತನಾಡಿದರು. ಕುಲಸಚಿವರಾದ ಪ್ರೊ.ರಮೇಶ ಲಂಡನಕರ್, ಮೌಲ್ಯ ಮಾಪನ ಕುಲಸಚಿವೆ ಮೇದಾವಿನಿ ಕಟ್ಟಿಮನಿ, ಸಿಂಡಿಕೇಟ್ ಸದಸ್ಯರಾದ ಪೀರ್ ಜಾದೆ, ಫೆಮೋವುದಿನ್, ವಿದ್ಯಾ ವಿಷಯಕ ಪರಿಷತ್ ಸದಸ್ಯರಾದ ಪ್ರೊ. ಹೂವಿನಭಾವಿ ಬಾಬಣ್ಣಾ, ಎಲ್ಲಾ ನಿಕಾಯದ ಡೀನರು ಮತ್ತು ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.