ಕಲಬುರಗಿ | ಬಲಾಢ್ಯ ಸಮುದಾಯಗಳನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆ ವಿರೋಧಿಸಿ ಪ್ರತಿಭಟನೆ
ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ-1 ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವ ಹಾಗೂ ಬಲಾಢ್ಯ ಸಮುದಾಯದವರನ್ನು ಎಸ್.ಟಿ ಪಟ್ಟಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ ಹೈ.ಕ.ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಹೋರಾಟಗಾರರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಕೂಡಲೆ ಹಿಂಪಡೆದು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಗಿರಿಜನ ಉಪಯೋಜನೆಯಡಿ ನಿಗದಿಯಾಗಿರುವ ಅನುದಾನವನ್ನು ಪರಿಶಿಷ್ಟರಲ್ಲದವರ ಉಪಯೋಗಕ್ಕೆ ಬಳಸಬಾರದು. ಆಂತಹ ಪ್ರಕರಣಗಳಲ್ಲಿ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ/ಎಸ್.ಟಿ. ನಕಲಿ ಜಾತಿ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ. ನಾಯಕ, ಜಿಲ್ಲಾ ಅಧ್ಯಕ್ಷ ಶರಣು ಸುಬೇದಾರ, ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ, ನಂದಕುಮಾರ ನಾಯಕ, ಮಾರುತಿ ಜಮಾದಾರ, ರಾಜು ಮಾವನೂರ, ತಿಪ್ಪಣ್ಣಾ ಇಟಗಾ, ಮಾರುತಿ ಜಾಕನಳ್ಳಿ, ಮಲ್ಲಿಕಾರ್ಜುನ ಸುಬೇದಾರ ಸೇರಿದಂತೆ ಇತರರು ಇದ್ದರು.