ಕಲಬುರಗಿ | ಕಾಳಗಿ ಇಓ, ರಟಕಲ್ ಪಿಡಿಓ ಅಮಾನತಿಗೆ ಆಗ್ರಹಿಸಿ, ಕತ್ತೆ ಮೆರವಣಿಗೆ ನಡೆಸಿ ಪ್ರತಿಭಟನೆ
ಕಲಬುರಗಿ : ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯತ್‌ನಲ್ಲಿ ತೆರಿಗೆ ಹಣವನ್ನು ನಿಧಿ-1ರ ಹಣವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿರುವ ಪಿಡಿಓ ಸಂತೋಷಕುಮಾರ ತೇಲಿ, ಬಿಲ್ ಕಲೆಕ್ಟರ್ ನಾಗಣ್ಣ ಮಾಮನಿ, ಶ್ರವಣ್ ಮತ್ತು ಕಾಳಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಇವರನ್ನು ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಬೇಕೆಂದು ಕಲ್ಯಾಣ ಕನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯ ಎದುರುಗಡೆ ಕತ್ತೆಗಳ ಕೊರಳಿಗೆ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ಫೋಟೋ ಹಾಕುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ ಭರಣಿ, ಕಾಳಗಿ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಟಕಲ್ ಗ್ರಾಮ ಪಂಚಾಯತ್‌ನ ಲ್ಲಿ ಎಪ್ರಿಲ್ ತಿಂಗಳಿಂದ ಜುಲೈ ತಿಂಗಳವರೆಗೆ ಡಿಸಿಬಿ ಪ್ರಕಾರ ಆನ್‍ಲೈನ್ ಮಶಿನ್ ಮುಖಾಂತರ ವಿವಿಧ ರೀತಿಯ ತೆರಿಗೆ ಹಣವನ್ನು ಸುಮಾರು 3ರಿಂದ 4 ಲಕ್ಷ ರೂ ವರೆಗೆ ತೆರಿಗೆ ವಸೂಲಿ ಮಾಡಿರುತ್ತಾರೆ. ಅಲ್ಲದೆ ನಮೂನೆ-3 ನಿಯಮ-20, ತೆರಿಗೆ ಸಾಮಾನ್ಯ ರಸೀದಿ ಪುಸ್ತಕದ ಮುಖಾಂತರ (ಮ್ಯಾನವೆಲ್) ನಗದು ರೂಪದಲ್ಲಿ ಸಮಾರು ಅಂದಾಜು 1-2 ಲಕ್ಷ ರೂಪಾಯಿಗಳು ತೆರಿಗೆ ವಸೂಲಿ ಮಾಡಿರುತ್ತಾರೆ.
ಆನ್‍ಲೈನ ಮಶೀನ್ ಮುಖಾಂತರ 3-ರಿಂದ 4 ಲಕ್ಷ ರೂ. ತೆರಿಗೆ ವಸೂಲಿ ಮಾಡಿದ್ದು ಮತ್ತು ಸಾಮಾನ್ಯ ರಸೀದಿ ಪುಸ್ತಕದ ಮುಖಾಂತರ 1-2 ಲಕ್ಷ ರೂ. ಅಂದರೆ ಒಟ್ಟಾರೆಯಾಗಿ ಸುಮಾರು 5-6 ಲಕ್ಷ ರೂಪಾಯಿ ತೆರಿಗೆ ಹಣವನ್ನು ಸಂದಾಯವಾಗಿರುತ್ತದೆ. ಈ ತೆರಿಗೆ ಹಣವನ್ನು, ತೆರಿಗೆ ವಸೂಲಿಯಾದ 24 ಗಂಟೆಯೊಳಗೆ ಸರಕಾರದ ನಿಧಿ-1 ಬ್ಯಾಂಕ ಖಾತೆಗೆ ಜಮಾ ಮಾಡಬೇಕಾಗಿರುತ್ತದೆ.
ಕರ ವಸೂಲಿಗಾರರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಕುಮಾರ ತೇಲಿ ಅವರು ಸೇರಿಕೊಂಡು ನಿಧಿ-1 ಬ್ಯಾಂಕ ಖಾತೆಗೆ ಜಮಾ ಮಾಡದೆ, ಸರಕಾರದ ನಿಯಮ ಮೀರಿ ಹಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಅಧಿಕಾರವನ್ನು ಬಳಸಿಕೊಂಡು ಸರಕಾರದ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಅಧಿಕಾರ ದುರ್ಬಳಕೆ, ಕರ್ತವ್ಯ ಲೋಪ, ಕಾನೂನು ಉಲ್ಲಂಘನೆ, ಅಕ್ರಮವಾಗಿ ಹಣ ಲೂಟಿ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಸರಕಾರದ ನಮೂನೆ-3 (ನಿಯಮ-20)ರ ತೆರಿಗೆ ಸಾಮಾನ್ಯ ರಶೀದಿ ಪುಸ್ತಕವನ್ನು ಬಂದ್ ಆದರೂ ಸಹ ಸಂತೋಷಕುಮಾರ ತೇಲಿ ರವರು ಮತ್ತು ಕರವಸೂಲಿಗಾರರು ಸೇರಿಕೊಂಡು ಸರಕಾರದ ಹಣವನ್ನು ಅಕ್ರಮವಾಗಿ ಲೂಟಿ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ. ಕೂಡಲೇ ಇಂತಹ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸತೀಶ ಕಡೂನ, ಪಪ್ಪು ಬಿದ್ದಾಪೂರ, ವಿಶ್ವನಾಥ ಡೇಕೂನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.