ಕಲಬುರಗಿ: ನ.2ರಂದು ಪಥಸಂಚಲನಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಆರೆಸ್ಸೆಸ್
ಅದೇ ದಿನ ನಮಗೂ ಅವಕಾಶ ಕೊಡಿ: ದಲಿತ ಪ್ಯಾಂಥರ್ಸ್, ಭೀಮ್ ಆರ್ಮಿ ಆಗ್ರಹ
ಕಲಬುರಗಿ: ಹೈಕೋರ್ಟ್ ಸೂಚನೆಯಂತೆ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ ಆರೆಸ್ಸೆಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್, ಸಂಘದ ಮುಖಂಡರು, ಬೌದ್ಧಿಕ ಪ್ರಮುಖ ಕೃಷ್ಣಾ ಜೋಶಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿದೆ.
ಇದೇ ವೇಳೆ ದಲಿತ ಪ್ಯಾಂಥರ್ಸ್ ಹಾಗೂ ಭೀಮ್ ಆರ್ಮಿಯ ಮುಖಂಡರು ತಮಗೂ ಸಹ ನ.2 ರಂದು ಭೀಮ ಪಥಸಂಚಲನಕ್ಕೆ ಅವಕಾಶ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ, ನೋಂದಣಿ ಇಲ್ಲದ ಆರೆಸ್ಸೆಸ್ ಗೆ ಸಂಭ್ರಮಾಚರಣೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು? ಆರೆಸ್ಸೆಸ್ ನವರು ಸಂವಿಧಾನದ ವಿರುದ್ಧವಾಗಿ ಚಟುವಟಿಕೆಗಳು ಮಾಡುತ್ತಾ ಬಂದಿದ್ದಾರೆ, ಈಗ ನಾವು ಸಂವಿಧಾನವನ್ನು ಉಳಿಸಲು ಮುಂದಾಗಬೇಕಿದೆ ಎಂದರು.
ನೋಂದಣಿ ಇಲ್ಲದ ಸಂಘಟನೆಯವರು ಬಡಿಗೆ ಹಿಡಿದುಕೊಂಡು ಹೋಗಲು ಅಧಿಕಾರಿಗಳು ಹೇಗೆ ಅನುಮತಿ ಕೊಡುತ್ತಾರೆ. ಆರೆಸ್ಸೆಸ್ ನವರು ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಹೊರಟಿದ್ದಾರೆ. ನಾವು ಭೀಮನ ಮಕ್ಕಳು, ಆರೆಸ್ಸೆಸ್ ನವರ ಶಕ್ತಿ ಪ್ರದರ್ಶನಕ್ಕೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಚಿತ್ತಾಪುರ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಪಾಲಪ್ ಗಲ್ಲಿ, ಬಸವೇಶ್ವರ ಚೌಕ್, ಹಳೆ ಕಪಡಾ ಬಜಾರ್, ಜನತಾ ಚೌಕ್, ನಾಗಾವಿ ಚೌಕ್, ಸೇವಾಲಾಲ್ ಚೌಕ್, ಪುರಸಭೆ ಎದುರಿನಿಂದ ಗಣೇಶ ಮಂದಿರ, ಕಾಶಿ ಗಲ್ಲಿ, ಬಸ್ ನಿಲ್ದಾಣದಿಂದ ಲಾಡ್ಡಿಂಗ್ ಕ್ರಾಸ್‌ವರೆಗೆ ಭೀಮ ಪಥ ಸಂಚಲನ ನಡೆಸುತ್ತೇವೆ ಎಂದು ಎಸ್.ಎಸ್.ತಾವಡೆ ತಿಳಿಸಿದರು.
ದಲಿತ ಪ್ಯಾಂಥರ್ಸ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಕೂಡ ನೀಲಿ ಧ್ವಜದೊಂದಿಗೆ ಭೀಮ ಪಥಸಂಚಲನಕ್ಕೆ ಅವಕಾಶ ಕೋರಿದ್ದಾರೆ.
ಅ.19ರಂದು, ಆರೆಸ್ಸೆಸ್ ಪಥ ಸಂಚಲನದ ದಿನವೇ ತಮಗೂ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ಭೀಮ್ ಆರ್ಮಿ ಭಾರತ ಏಕತಾ ಮಿಷನ್, ದಲಿತ ಪ್ಯಾಂಥರ್ ಸಂಘಟನೆಯವರು ಚಿತ್ತಾಪುರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರಿಂದ, ಕಾನೂನು ಸುವ್ಯವಸ್ಥೆಯ ಕಾರಣ ನೀಡಿ, ತಹಸೀಲ್ದಾರ್ ಅಂದು ಯಾವುದೇ ಸಂಘಟನೆಗಳಿಗೆ ಪಥ ಸಂಚಲನಕ್ಕೆ ಅನುಮತಿ ನೀಡದೆ ಆದೇಶ ಹೊರಡಿಸಿದ್ದರು.
ಪಥಸಂಚಲನಕ್ಕೆ ತ್ರಿಕೋನ ಸ್ಪರ್ಧೆ:
ನ.2 ರಂದು ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರೆ, ಇತ್ತ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಹಾಗೂ ದಲಿತ ಪ್ಯಾಂಥರ್ಸ್ ಸಂಘಟನೆಗಳು ಅದೇ ದಿನದಂದು ಭೀಮ ಪಥಸಂಚಲನಕ್ಕೆ ಅನುಮತಿ ಕೊಡಬೇಕೆಂದು ಮನವಿ ಮಾಡಿವೆ. ಒಂದೇ ದಿನಕ್ಕೆ ಮೂರು ಸಂಘಟನೆಗಳ ಪಥಸಂಚಲನಕ್ಕೆ ಅವಕಾಶ ಸಿಗುತ್ತಾ? ಎನ್ನುವುದನ್ನೇ ಕಾದುನೋಡಬೇಕಿದೆ. ಮೂರು ಸಂಘಟನೆಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಂತಿದೆ.