ಕಲಬುರಗಿ| ಶಾಲಾ ಹೆಣ್ಣು ಮಕ್ಕಳಿಗೆ ಉಚಿತ ವಿತರಣೆಯ 'ಶುಚಿ ಸ್ಯಾನಿಟರಿ ಪ್ಯಾಡ್ ಗಳಿಗೆ ಬೆಂಕಿ
ಕಲಬುರಗಿ: ಪ್ರೌಢಶಾಲಾ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹಂಚಬೇಕಿದ್ದ 'ಶುಚಿ ಯೋಜನೆ'ಯ ಸ್ಯಾನಿಟರಿ ಪ್ಯಾಡ್ ಗಳನ್ನು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಕಲಬುರಗಿ ನಗರ ಹೊರವಲಯದ ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಇಲ್ಲಿನ ಹಳೇ ಕಟ್ಟಡ ಕೆಡವಿದ ಸಂದರ್ಭದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾವಿರಾರು ಸ್ಯಾನಿಟರಿ ಪ್ಯಾಡ್ಗಳು ಪತ್ತೆಯಾಗಿವೆ. ಆರೋಗ್ಯ ದೃಷ್ಟಿಯಿಂದ ಅರ್ಹ ಶಾಲಾ ಕಾಲೇಜಿನ ಹೆಣ್ಣು ಮಕ್ಕಳಿಗೆ ಈ ಪ್ಯಾಡ್ ಗಳನ್ನು ಉಚಿತವಾಗಿ ಹಂಚಬೇಕಿತ್ತು. ಆದರೆ, ಹೆಣ್ಣು ಮಕ್ಕಳಿಗೆ ಹಂಚದೆ ಗೋಡೌನ್ ನಲ್ಲೇ ಇಟ್ಟುಕೊಂಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಇದೀಗ ಲಕ್ಷಾಂತರ ರೂ. ಮೌಲ್ಯದ ಶುಚಿ ಪ್ಯಾಡ್ ಗಳಿಗೆ ಬೆಂಕಿ ಇಟ್ಟಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾನಿಟರಿ ಪ್ಯಾಡ್ ಹಂಚಿಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಉಚಿತವಾಗಿ ಹಂಚಬೇಕಿದ್ದ ರಾಜ್ಯ ಸರಕಾರದ ಯೋಜನೆಯ ಶುಚಿ ಪ್ಯಾಡ್ ಗೆ ಬೆಂಕಿ ಹಚ್ಚಿ ಸುಟ್ಟು ನಾಶ ಮಾಡಲಾಗುತ್ತಿದೆ. ಯಾಕೆ ಹೀಗೆ ಮಾಡಲಾಗುತ್ತಿದೆ ಎಂಬ ಜನರ ಪ್ರಶ್ನೆಗಳಿಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡಿಲ್ಲ ಎಂದು ಗ್ರಾಮದ ಮುಖಂಡರು ಆರೋಪಿಸಿದ್ದಾರೆ. ಸ್ಯಾನಿಟರಿ ಪ್ಯಾಡ್ಗಳು ಬೆಂಕಿಯಲ್ಲಿ ಸುಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫರಹತಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಚಿ ನ್ಯಾಪ್ ಕಿನ್ ಗಳನ್ನು ಸುಟ್ಟಿರುವ ಕುರಿತು ಕೂಲಂಕಷ ವಿಚಾರಣೆ ಕೈಗೊಂಡು ಸ್ಪಷ್ಟ ಅಭಿಪ್ರಾಯದೊಂದಿಗೆ 24 ಗಂಟೆಯಲ್ಲಿ ವರದಿ ನೀಡುವಂತೆ ಜಿಲ್ಲಾ ಆರ್ಸಿಎಚ್, ತಾಲೂಕು ಆರೋಗ್ಯ ಅಧಿಕಾರಿ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿ ನೋಟಿಸ್ ಕೊಡಲಾಗಿದೆ.
-ಡಾ.ಶರಣಬಸಪ್ಪ ಕ್ಯಾತನಾಳ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ