×
Ad

ಕಲಬುರಗಿ | ಟಂಟಂ ಪಲ್ಟಿ : 7 ವಿದ್ಯಾರ್ಥಿಗಳು ಸೇರಿ 8 ಮಂದಿಗೆ ಗಾಯ

Update: 2026-01-08 19:39 IST

ಕಲಬುರಗಿ(ಕಾಳಗಿ): ಸರಕಾರಿ ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಟಂಟಂ ವಾಹನವೊಂದು ಪಲ್ಟಿಯಾಗಿ ಏಳು ವಿದ್ಯಾರ್ಥಿಗಳು ಸೇರಿ ಎಂಟು ಮಂದಿಗೆ ಗಾಯಗೊಂಡಿರುವ ಘಟನೆ ಕಾಳಗಿ ತಾಲೂಕಿನ ರೇವಗ್ಗಿ ಗುಡ್ಡದ ಕಮಾನ್ ಬಳಿ ಗುರುವಾರ ನಡೆದಿದೆ.

ಘಟನೆಯಲ್ಲಿ ಹಲಚೇರಾ ಗ್ರಾಮದ ವೃದ್ಧೆ ಬಸಮ್ಮ ವಿಶ್ವನಾಥ ಸೇರಿ (65) ಹಾಗೂ ಬುಗಡಿತಾಂಡಾದ 9ನೇ ತರಗತಿ ಬಾಲಕಿ ಪ್ರಿಯಾಂಕಾ ರವಿ (15) ಎಂಬುವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗೋಗಿ ಗ್ರಾಮದ 1ನೇ ತರಗತಿ ಬಾಲಕಿ ಸಮೃದ್ಧಿ ವಿನೋದ (7), ಬುಗಡಿ ತಾಂಡಾದ ಪಿಯುಸಿ ವಿದ್ಯಾರ್ಥಿನಿಯರಾದ ಸುಮಿತ್ರಾ ತಾರಾಸಿಂಗ್ ಚವಾಣ್ (18), ಗೀತಾ ರವಿ ರಾಠೋಡ (18), 10ನೇ ತರಗತಿಯ ನಿಶಾ ರಮೇಶ ರಾಠೋಡ (16) ಮತ್ತು 9ನೇ ತರಗತಿಯ ನಿಖಿತಾ ಮೋಹನ ರಾಠೋಡ (15), ನಿಶಾ ರಾಮು ರಾಠೋಡ (15) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಅರಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ‌ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬುಗಡಿ ತಾಂಡದಿಂದ ರೇವಗ್ಗಿ ಗುಡ್ಡದ ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳನ್ನು ಬಿಡಲು ಗುರುವಾರ ಬೆಳಗ್ಗೆ ಬರುತ್ತಿದ್ದ ಟಂಟಂ ವಾಹನದ ಮುಂದೆ ಬೆಕ್ಕು ಅಡ್ಡ ಬಂದಿದ್ದು, ಬೆಕ್ಕಿನ ಪ್ರಾಣ ಉಳಿಸಲು ಹೋಗಿ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದ ಕಮಾನ್ ಮುಂದೆ ಟಂಟಂ ಪಲ್ಟಿಯಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಬಿ.ಕೆ., ಎಎಸ್ಐ ಜಗನ್ನಾಥ, ಸಿಬ್ಬಂದಿ ಶ್ರೀಕಾಂತಯ್ಯಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದು, ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News