×
Ad

ಕಲಬುರಗಿ | ಅಹಿಂಸೆ ತತ್ವವೇ ಗಾಂಧೀಯನ್ನು “ಮಹಾತ್ಮ”ರನ್ನಾಗಿಸಿದೆ: ಶಶೀಲ್ ನಮೋಶಿ

Update: 2025-10-02 18:46 IST

ಕಲಬುರಗಿ: ಸತ್ಯ, ಅಹಿಂಸಾ ತತ್ವದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ವಿಶ್ವದಲ್ಲಿಯೇ “ಮಹಾತ್ಮ” ರನ್ನಾಗಿಸಿದೆ ಎಂದು ವಿಧಾನ ಪರಿಷತ್ ಶಾಸಕರುಗಳಾದ ಶಶೀಲ್ ಜಿ.ನಮೋಶಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಕಲಬುರಗಿ ನಗರದ ಎಸ್.ವಿ.ಪಿ. ವೃತ್ತದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಿದ "ಮಹಾತ್ಮ ಗಾಂಧೀಜಿಯರವರ 156ನೇ ಜಯಂತಿ” ಅಂಗವಾಗಿ ಗಾಂಧೀಜಿಯವರ ತತ್ವ-ಸಂದೇಶ ಕುರಿತು ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ ಹಾಗೂ ಸರ್ವಧರ್ಮ ಪ್ರಾರ್ಥನೆ-ಸದ್ಭಾವನಾ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮ 21ನೇ ವಯಸ್ಸಿನಲ್ಲಿಯೆ ದಕ್ಷಿಣ ಅಫ್ರಿಕಾದಿಂದ ವಕೀಲ ವ್ಯಾಸಂಗ ಮುಗಿಸಿಕೊಂಡು ಭಾರತಕ್ಕೆ ಬಂದ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಇಡೀ ದೇಶವನ್ನು ಒಗ್ಗೂಡಿಸಿದರು. ಇವರ ಅಹಿಂಸೆ ತತ್ವ ಮತ್ತು ದೃಢವಾದ ನಾಯಕತ್ವದ ಪರಿಣಾಮ ಭಾರತವು ಸ್ವಾತಂತ್ರ್ಯದ ಹಕ್ಕಿಯಾಗಿ ಉದಯಿಸಿತು. ಹೀಗಾಗಿಯೇ ಗಾಂಧಿಯನ್ನು ಭಾರತದ “ರಾಷ್ಟ್ರ ಪಿತಾಮಹ” ಎಂದು ಕರೆಯಲಾಗುತ್ತದೆ ಎಂದರು.

ಸಮಾಜ ಬದಲಾವಣೆಗೆ ನಾವೇ ಮೊದಲಿಗರಾಗಬೇಕು :

ಡಾ ಕಲಬುರಗಿಯ ಜೇವರ್ಗಿ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಬಿ. ನಾಸಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಹಳ್ಳಿಗಳ ಬದುಕು ಹಸನಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದಿದ್ದ ಬಾಪು ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಪರಿಣಾಮವೇ ಇಂದು ಪಂಚಾಯತ್ ರಾಜ್ಯ ಕೇಂದ್ರಿಕರಣ ವ್ಯವಸ್ಥೆ ನಮ್ಮುಂದಿದೆ. ನುಡಿದಂತೆ ನಡೆದ ಗಾಂಧೀಜಿಯು ಸತ್ಯ, ಪ್ರಮಾಣಿಕತೆ, ಸರಳತೆ, ಅಹಿಂಸೆಯನ್ನೆ ಪ್ರತಿಪಾದಿಸಿದರು. ಭ್ರಷ್ಠಾಚಾರ ರಹಿತ ಸಮಾಜ ನಿರ್ಮಾಣ ಮಾಡಬೇಕಾದರೆ ಮೊದಲು ನಾವು ಬದಲಾಗಬೇಕಿದೆ ಎಂದರು.

ಮಧ್ಯರಾತ್ರಿಯಲ್ಲಿ ಹೆಣ್ಣು ಸುರಕ್ಷಿತವಾಗಿ ಓಡಾಡಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಎಂದಿದ್ದರು ಗಾಂದೀಜಿಯವರು. ಆದರೆ, ಇಂದು ಪ್ರತಿ ಒಂದು ಗಂಟೆಯಲ್ಲಿ 17 ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಮಹಿಳಾ ದೌರ್ಜನ್ಯ ಹೆಚ್ಚುತ್ತಿದೆ. ಇದುವೇ ಬಾಪೂಜಿ ಕಂಡ ಕನಸಾ? ಎಂಬುದನ್ನು ನಾವು ಯೋಚಿಸಬೇಕಿದೆ. ಜೀವನದುದ್ದಕ್ಕೂ ಸರಳತೆ ಮೆರೆದ ಗಾಂಧೀಜಿ ಅವರ ಜೀವನವೇ ನಮಗೆ ಸಂದೇಶವಾಗಿದೆ. ಅವರ ಸತ್ಯ, ಅಹಿಂಸೆ ತತ್ವ ಹಿಂದಿಗ್ಗಿಂತ ಇಂದು ಅತ್ಯಂತ ಅವಶ್ಯಕವಾಗಿವೆ ಎಂದರು.

ಇದಕ್ಕು ಮುನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಬಾಪೂಜಿ ಪ್ರಬಂಧ ಸ್ಫರ್ಧೇಯಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನ ವಿತರಿಸಿ ಶುಭ ಕೋರಿದರು.

ಕಾರ್ಯಕ್ರಮಕ್ಕೂ ಮುನ್ನ ಟೌನ್ ಹಾಲ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಶಾಸಕ ಅಲ್ಲಮಪ್ರಭು ಪಾಟೀಲ್‌, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಮಾಲಾರ್ಪಣೆ ಮಾಡಿ ಬಾಪೂಜಿಗೆ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲಂ ಸಾರಂಗಮಠದ ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹಿಂದೂ ಧರ್ಮ, ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ ಅವರು ಇಸ್ಲಾಂ ಧರ್ಮ, ಕಲಬುರಗಿಯ ಸಂಕಲ್ಪ ವಿಹಾರ ಮತ್ತು ದಮ್ಮ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಭಿಕ್ಕುಣಿ ಸುಮನ ಅವರು ಬೌದ್ಧ ಧರ್ಮ, ಕಲಬುರಗಿ ಸೆಂಟ್ ಮೇರಿ ಚರ್ಚ್‌ ಫಾದರ್ ಆರ್ಯೋನ್ ವಾಸ್ ಅವರು ಕ್ರಿಶ್ಚಿಯನ್ ಧರ್ಮ, ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸದಸ್ಯ ದೀಪಕ್ ಪಂಡಿತ್ ಅವರು ಜೈನ್ ಧರ್ಮ ಹಾಗೂ ಕಲಬುರಗಿಯ ಶ್ರೀ ಗುರುನಾನಕ್ ಮಠದ ಗ್ರಂಥಿ ಭಾಯ್ ದೀಪ್ ಸಿಂಗ್ ಅವರು ಸಿಖ್ ಧರ್ಮದ ಪಠಣ ಬೋಧಿಸಿದರು.

ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ :

ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಾಪೂಜಿ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿಭಾಗದಿಂದ ತಲಾ ಮೂವರು ಸೇರಿ ಒಟ್ಟು 9 ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು.

ಭಾರತ ಸೇವಾ ದಳದ ಜಿಲ್ಲಾ ಸಂಘಟಿಕ ಚಂದ್ರಶೇಖರ ಜಮಾದಾರ ನೇತೃತ್ವದಲ್ಲಿ ಸರ್ವಧರ್ಮೀಯ ಪ್ರಾರ್ಥನೆ ನಡೆಯಿತು. ಕಲಾವಿದ ಶ್ರೀಧರ ಹೊಸಮನಿ ಮತ್ತು ಅವರ ತಂಡದಿಂದ ಸದ್ಭಾವನಾ ಗೀತ ಗಾಯನಗಳ ಜೊತೆಗೆ ಗಾಂಧಿ ಅವರಿಗೆ ಪ್ರಿಯವಾದ ಹಾಡುಗಳನ್ನು ಹಾಡಿದರು. ಕೊನೆಯದಾಗಿ “ರಘುಪತಿ ರಾಘವ ರಾಜಾ ರಾಮ್” ಭಜನೆ ಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಭಾರತ ಸೇವಾದಳದ ಕಾರ್ಯದರ್ಶಿ ಸುರೇಶ ಬಡಿಗೇರ ಸೇರಿದಂತೆ ಸಾರ್ವಜನಿಕರು, ಮಕ್ಕಳು ಭಾಗವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸ್ವಾಗತಿಸಿದರು. ಶಿವರಾಜ ಅಣಜಗಿ ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News