ಕಲಬುರಗಿ | ಮನೆಗಳ್ಳತನ, ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
7.62 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಬಂಧಿತ ಆರೋಪಿಗಳು
ಕಲಬುರಗಿ: ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಐದು ಮನೆಗಳ್ಳತನ ಹಾಗೂ ಒಂದು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 7.62 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಶರಣಪ್ಪ ಅವರು, ಅಫಜಲಪುರ ತಾಲೂಕಿನ ಗೌರ (ಬಿ) ಗ್ರಾಮದ ನಿವಾಸಿ ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ ಪೂಜಾರಿ(24) ಹಾಗೂ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಚಣ ಗ್ರಾಮದ ಸಂತೋಷ್ ಶಂಕ್ರಪ್ಪ(30) ಬಂಧಿತ ಆರೋಪಿಗಳು.
ಕಲಬುರಗಿ ಹೊರವಲಯದ ದಾರುನಾಯಕ ತಾಂಡಾದ ಕೂಲಿಕಾರ್ಮಿಕ ಮಹಿಳೆ ಸುನೀತಾ ರಾಠೋಡ್ ಎಂಬವರು ಅಪರಿಚಿತ ವ್ಯಕ್ತಿಯೋರ್ವ ತನ್ನ ಕೊರಳಲ್ಲಿನ 3 ಗ್ರಾಂ ಬಂಗಾರದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು, ಒಂದು ಸುಲಿಗೆ ಪ್ರಕರಣ ಜೊತೆಗೆ 5 ಮನೆಗಳ್ಳತನ ಮಾಡಿರುವ ಆರೋಪಿಗಳಿಬ್ಬರನ್ನು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳ ಬಳಿ 7.62 ಲಕ್ಷ ಮೌಲ್ಯದ 61 ಗ್ರಾಂ ಬಂಗಾರ ಹಾಗೂ 680 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಬ್ ಅರ್ಬನ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ, ಪಿಐ ಚಂದ್ರಶೇಖರ್ ತಿಗಡಿ ಸೇರಿದಂತೆ ಮತ್ತಿತರರು ಇದ್ದರು.