×
Ad

ಕಲಬುರಗಿ | ವಿದ್ಯಾರ್ಥಿನಿಯರ ಆರೋಗ್ಯ ರಕ್ಷಣೆಗೆ 'ವಿದ್ಯಾರ್ಥಿ ಚೇತನ' ಆಯುಷ್ ಸೇವೆಗೆ ಚಾಲನೆ

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ಆಧಾರ: ಡಾ.ಬಬಲಾದಿ

Update: 2026-01-13 18:55 IST

ಕಲಬುರಗಿ: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕಲಬುರಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಬಲಾದಿ ಕೆ. ಹೇಳಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಹಮ್ಮಿಕೊಂಡಿದ್ದ 'ವಿದ್ಯಾರ್ಥಿ ಚೇತನ' ಆಯುಷ್ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ.ಮಹಾದೇವಿ ಮಾತನಾಡಿ, ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ಸಮತೋಲನವೇ ಉತ್ತಮ ಆರೋಗ್ಯದ ಗುಟ್ಟು. ಆಯುರ್ವೇದ ಚಿಕಿತ್ಸೆಯು ಈ ಸಮತೋಲನ ಸಾಧಿಸಲು ನೆರವಾಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಬಗ್ಗೆ ಮಾಹಿತಿ ನೀಡಿದರು.

ಆಯುರ್ವೇದ ತಜ್ಞರಾದ ಡಾ.ಶಿಲ್ಪಾ ಮತ್ತು ಡಾ. ಅಶ್ವಿನಿ ಅವರು ಮಾತನಾಡಿ, ಖರ್ಜೂರ ಮಂಥ ಪಾನಕವು ಶಕ್ತಿವರ್ಧಕ ಹಾಗೂ ರಕ್ತವರ್ಧಕವಾಗಿದೆ. ಇದು ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಕಂಡುಬರುವ ಆಯಾಸ, ದೌರ್ಬಲ್ಯ ಮತ್ತು ಪೋಷಕಾಂಶಗಳ ಕೊರತೆಯನ್ನು ನಿವಾರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪಾನಕ ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟು, ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು.

ಕಾರ್ಯಕ್ರಮದ ನಂತರ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.

ವೇದಿಕೆಯ ಮೇಲೆ ವೈದ್ಯಾಧಿಕಾರಿ ಡಾ. ಸಂಜಯ ಕುಲಕರ್ಣಿ, ವಸತಿ ನಿಲಯದ ಮೇಲ್ವಿಚಾರಕಿ ಗಾಯತ್ರಿ, ಬಸಮ್ಮ, ಯೋಗ ಶಿಕ್ಷಕಿ ಶಶಿಕಲಾ, ಶುಶ್ರೂಷಾಧಿಕಾರಿ ಶಾಂತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ಮಹಾದೇವಿ ಕಾರ್ಯಕ್ರಮ ನಿರೂಪಿಸಿದರೆ, ಡಾ. ಸಂಜಯ ಕುಲಕರ್ಣಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News