ಕಾಳಗಿ ಪಪಂ ಕಾಂಗ್ರೆಸ್ ತೆಕ್ಕೆಗೆ : ಅಧ್ಯಕ್ಷರಾಗಿ ಸಾಲಿಯಾಬೇಗಂ, ಉಪಾಧ್ಯಕ್ಷರಾಗಿ ಶರಣಪ್ಪ ಆಯ್ಕೆ
ಕಾಳಗಿ: ಸ್ಥಳೀಯ ಪಟ್ಟಣ ಪಂಚಾಯಿತಿಯ ಮೊದಲ ಅವಧಿಯ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದು, ಅಧ್ಯಕ್ಷರಾಗಿ ಸಾಲಿಯಾಬೇಗಂ ಮಹೆಬೂಬ್ ಬೇಗ್ ಬಿಜಾಪೂರ ಹಾಗೂ ಉಪಾಧ್ಯಕ್ಷರಾಗಿ ಶರಣಪ್ಪ ಬೆಲೂರ ಆಯ್ಕೆಯಾಗಿದ್ದಾರೆ. ಈ ಮೂಲಕ ಪಟ್ಟಣ ಪಂಚಾಯಿತಿಯ ಮೊದಲ ಅವಧಿಯ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಬುಧವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಪೃಥ್ವಿರಾಜ್ ಪಾಟೀಲ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸಾಲಿಯಾಬೇಗಂ ಮಹೆಬೂಬ್ ಬೇಗ್ ಬಿಜಾಪೂರ ಹಾಗೂ ಬಿಜೆಪಿ ಪಕ್ಷದಿಂದ ರಮೇಶ್ ಕಿಟ್ಟದ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶರಣಪ್ಪ ಬೆಲೂರ ಹಾಗೂ ಬಿಜೆಪಿ ಪಕ್ಷದಿಂದ ಜಿತೇಂದ್ರ ನೂರಸಿಂಗ್ ರಾಠೋಡ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 11 ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಹಾಗೂ ಬೀದರ್ ಸಂಸದ ಸಾಗರ ಖಂಡ್ರೆ ಸೇರಿದಂತೆ ಒಟ್ಟು 13 ಜನರಿಗೆ ಮತದಾನದ ಹಕ್ಕು ಇತ್ತು.
ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸಾಲಿಯಾಬೇಗಂ ಮಹೆಬೂಬ್ ಬೇಗ್ ಬಿಜಾಪೂರ ಹಾಗೂ ಶರಣಪ್ಪ ಬೆಲೂರ ತಲಾ ಏಳು ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿ ಅಭ್ಯರ್ಥಿಗಳಾದ ರಮೇಶ್ ಕಿಟ್ಟದ ಹಾಗೂ ಜಿತೇಂದ್ರ ನೂರಸಿಂಗ್ ರಾಠೋಡ ತಲಾ ಆರು ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣೆಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಹಾಗೂ ಸಂಸದ ಸಾಗರ ಖಂಡ್ರೆ ಭಾಗವಹಿಸಿ ಮತ ಚಲಾಯಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ಶಾಖಾಪೂರ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವಿಜಯೋತ್ಸವ :
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು.
ನೂತನ ಪಪಂ ಅಧ್ಯಕ್ಷೆ ಸಾಲಿಯಾಬೇಗಂ ಮಹೆಬೂಬ ಬೇಗ್ ಬಿಜಾಪುರ, ಉಪಾಧ್ಯಕ್ಷ ಶರಣಪ್ಪ ಬೆಲೂರ ಅವರನ್ನು ಸಂಸದ ಸಾಗರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕಿರಣ ದೇಶಮುಖ, ಜಿಪಂ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ ಸನ್ಮಾನಿಸಿ ಶುಭ ಹಾರೈಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಮಾಜಿ ಜಿಪಂ ಸದಸ್ಯ ರಾಜೇಶ್ ಗುತ್ತೇದಾರ, ಸುಭಾಷ್ ರಾಠೋಡ, ಮಲ್ಲಿಕಾರ್ಜುನ ಗಾಜರೆ, ಭೀಮರಾವ್ ಟಿಟಿ, ಅನೀಲಕುಮಾರ ಜಮಾದಾರ, ಶರಣಪ್ಪ ಮೊತಕಪಳ್ಳಿ, ರಾಘವೇಂದ್ರ ಗುತ್ತೇದಾರ, ಪ್ರದೀಪ ಡೊಣ್ಣೂರ, ದೇವೀಂದ್ರಪ್ಪ ಹೆಬ್ಬಾಳ, ಶರಣು ಮಜ್ಜಿಗೆ, ವೇದಪ್ರಕಾಶ ಮೊಟಗಿ, ಸಂತೋಷ ಪತಂಗೆ ಸೇರಿದಂತೆ ನೂರಾರು ಜನರು ಇದ್ದರು.