×
Ad

ಭಾರತದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ : ಡಾ. ಶಿವರಂಜನ ಸತ್ಯಂಪೇಟೆ

Update: 2025-11-26 17:36 IST

ಕಲಬುರಗಿ: ಭಾರತದ ಲಿಖಿತ ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ನ್ಯಾಯ ಮತ್ತು ಮಾನವೀಯತೆಯ ಅಂಶಗಳನ್ನು ಅಳವಡಿಸುವುದರ ಮೂಲಕ ಪ್ರತಿಯೊಬ್ಬ ಭಾರತೀಯರು ವಿಶ್ವ ಮಟ್ಟದಲ್ಲಿ ಗೌರವಯುತ ನಾಗರಿಕರಾಗಿ ಬೆಳೆದು ನಿಲ್ಲುವಂತಾಗಿದೆ ಎಂದು ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಸರಕಾರಿ ಪ್ರೌಢಶಾಲೆ ತಾರಫೈಲ್, ಕರ್ನಾಟಕ ಪ್ರತಿಭಾ ಅಕಾಡೆಮಿ ಹಾಗೂ ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಗರದ ತಾರಫೈಲ್ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ, ರಸಪ್ರಶ್ನೆ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಅವರು, ಅಂಬೇಡ್ಕರ್ ಅವರು ಭಾರತದ ಬೆಳಕು. ಸಂವಿಧಾನ ಕೇವಲ ಗ್ರಂಥವಲ್ಲ ಅದು ನಮ್ಮ ಬದುಕಾಗಬೇಕು ಎಂದು ತಿಳಿಸಿದರು.

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಹಾಗೂ ವಿಶಿಷ್ಠ ಸ್ಥಾನ ಪಡೆದಿದ್ದು, ಗಾಂಧಿ ಮತ್ತು ಅಂಬೇಡ್ಕರ್ ಅವರು ದೇಶದ ಎರಡು ಕಣ್ಣುಗಳು.‌ ನಮ್ಮದು ಸಶಕ್ತ ಸಂವಿಧಾನ. ಸಂವಿಧಾನವೇ ನಮ್ಮೆಲ್ಲರ ಪವಿತ್ರ ಗ್ರಂಥ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ರಾಜಕುಮಾರ್‌ ಪಾಟೀಲ್‌ ಮಾತನಾಡಿ, ಭಾರತೀಯರಾದ ನಾವು ಸಂವಿಧಾನ ಪಾಲನೆ ಮಾಡುವ ಮೂಲಕ ಆದರ್ಶ ರಾಷ್ಟ್ರ ಸ್ಥಾಪಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ಕಲುಷಿತಗೊಂಡಿದ್ದ ವ್ಯವಸ್ಥೆಗೆ ಬೆಳಕು ನೀಡುವ ಮೌಲ್ಯಾಧಾರಿತ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.

ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ್ ಚಿಕಣಿ, ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಸುನಿಲ್‌ ಮಾನಪಡೆ, ಸಾಮಾಜಿಕ ಚಿಂತಕ ಬಿ.ಎಂ. ರಾವೂರ, ಜ್ಯೋತಿದೇವಿ ಹವಾಲ್ದಾರ್ ಮುಖ್ಯ ಅತಿಥಿಗಳಾಗಿದ್ದರು.

ಶಿಕ್ಷಕರಾದ ಈರಣ್ಣ ಕೆಂಭಾವಿ ಕಾರ್ಯಕ್ರಮ ನಿರೂಪಿಸಿದರು. ಸುಂದರ ರಾಷ್ಟ್ರಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜೀವ್‌ ಕುಮಾರ್‌ ಕಾಂಬಳೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News