ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಾಯಿ-ಮಕ್ಕಳ ಮರಣದ ಪ್ರಮಾಣ ಹೆಚ್ಚು: ನಾಗಣಗೌಡ ಕೆ.
ಕಲಬುರಗಿ : ರಾಜ್ಯದ ಇತರೆ ಪ್ರದೇಶಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ತಾಯಿ-ಮಕ್ಕಳ ಸಾವು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಸರ್ಕಾರಕ್ಕೆ ಆಯೋಗದಿಂದ ಮಾರ್ಗೋಪಾಯಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣಗೌಡ ಕೆ. ಹೇಳಿದರು.
ಗುರುವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಗರ್ಭಿಣಿ ಬಾಣಂತಿಯರ, ಮಕ್ಕಳ ಸಾವು ಕಂಡಿದ್ದೇವೆ. ಯಾದಗಿರಿಯಲ್ಲಿಯೂ ಆಗಾಗ ಪ್ರಕರಣಗಳು ವರದಿಯಾಗುತ್ತಲೆ ಇವೆ. ತಾಯಿಗೆ ಪೌಷ್ಠಿಕ ಆಹಾರ ಸಿಗದಿದ್ದರೆ ಆರೋಗ್ಯವಂತ ಮಕ್ಕಳು ಹುಟ್ಟುವುದಾದರೆ ಹೇಗೆ ಎಂದ ಅವರು, ಈ ನಿಟ್ಟಿನಲ್ಲಿ ಆಯೋಗವು ಸರ್ಕಾರಕ್ಕೆ ನಿವಾರಣಾ ಕ್ರಮಗಳ ಕುರಿತು ಸಲಹಾತ್ಮಕ ವರದಿ ನೀಡಲಿದೆ ಎಂದರು.
ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2016ರಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಕಾಯ್ದೆ ಜಾರಿಗೆ ತಂದಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾತ್ರ ಮಕ್ಕಳ ವಿಚಾರ ಸಂಬಂಧಿಸಿದ್ದು ಎಂದು ಕೈತೊಳೆದು ಕೂರುವಂತಿಲ್ಲ. ಸರ್ಕಾರದ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಾಗ ಮಾತ್ರ ಮಕ್ಕಳ ರಕ್ಷಣೆ ಸಾಧ್ಯ. ಇನ್ನು ಇದಕ್ಕೆ ಜನಸಮುದಾಯ ಸಹಭಾಗಿತ್ವವು ಅಷ್ಟೆ ಮುಖ್ಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ಹೆಚ್ಚಿದೆ. ಮಕ್ಕಳನ್ನು ಸರಿಯಾಗಿ ಬೆಳಸದಿದ್ದರೆ ಮತ್ತು ಪರಿಸರವನ್ನು ಸಮತೋಲನದಿಂದ ಕಾಪಾಡಿಕೊಳ್ಳದಿದ್ದರೆ ರಾಷ್ಟ್ರ ಕಟ್ಟುವುದು ಅಸಾಧ್ಯ ಎಂದ ಅವರು, ರಾಜ್ಯದಲ್ಲಿ ವಾಸ್ತವವಾಗಿ ಆಗಿರುವ ಬಾಲ್ಯ ವಿವಾಹದ ಕುರಿತು ತಜ್ಞರಿಂದ ಅಧ್ಯಯನ ನಡೆಯುತ್ತಿದೆ ಎಂದರು.
ನಗರದ ಎರಡ್ಮೂರು ಶಾಲೆಗಳಿಗೆ ಭೇಟಿ ನೀಡಿದ್ದು, ಎಲ್ಲಿಯೂ ಚೈಲ್ಡ್ ಲೈನ್ 1098 ಮತ್ತು ಪೊಲೀಸರು ರಕ್ಷಣೆಗೆ ಬರುವ ತುರ್ತು ಸ್ಪಂದನೆಯ 112 ಸಂಖ್ಯೆ ಶಾಲಾ ಸೂಚನಾ ಫಲಕ ಅಥವಾ ಗೋಡೆ ಮೇಲೆ ಕಂಡಿಲ್ಲ. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಪ್ರಕಾರ ಪ್ರತಿ ಶಾಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ರಚಿಸಿ ಪ್ರತಿ ಮಾಹೆ ಸಭೆ ಕರೆದು ಅವರ ಸಮಸ್ಯೆ ಆಲಿಸಬೇಕಾಗುತ್ತದೆ ಎಂದ ಅವರು, ಶಾಲಾ ಹಂತದಲ್ಲಿ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಡಿ.ಡಿ.ಪಿ.ಐ ಮತ್ತು ಡಿ.ಡಿ.ಪಿ.ಯು ಅವರಿಗೆ ಸೂಚನೆ ನೀಡಿದ್ದೇನೆ ಎಂದರು.
ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರ:
ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳ ಸ್ಥಿತಿ ಗತಿ, ಶಾಲೆಯಿಂದ ಹೊರಗುಳಿದ ಮಕ್ಕಳು, ಮಕ್ಕಳ ಭಿಕ್ಷಾಟನೆ ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಕುರಿತು ಕಲಬುರಗಿ ವಿಭಾಗದ 7 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಪುನರ್‌ಮನನ ಮಾಡುವ ನಿಟ್ಟಿನಲ್ಲಿ ಇದೇ ಫೆ.28 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವಿಭಾಗ ಮಟ್ಟದ ತರಬೇತಿ ಕಾರ್ಯಗಾರ ಆಯೋಜಿಸಿದ್ದು, ಸುಮಾರು 300 ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈಗಾಗಲೆ ಮೈಸೂರಿನಲ್ಲಿ ಈ ರೀತಿ ಕಾರ್ಯಾಗಾರ ಮಾಡಿದ್ದು, ಮಾ.1 ರಂದು ಬೆಳಗಾವಿಯಲ್ಲಿ ಆಯೋಜಿಸಲಿದೆ. ಬೆಂಗಳೂರಿನಲ್ಲಿ ಇದೇ ರೀತಿಯ ವಿಭಾಗೀಯ ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದು ಅಧ್ಯಕ್ಷ ನಾನಗೌಡ ಕೆ. ಹೇಳಿದರು.
ಗ್ರಾಮ ಪಂಚಾಯತ್ ಹಂತದಲ್ಲಿ ಕಣ್ಗಾವಲು ಸಮಿತಿ ರಚನೆ :
ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮತು ತಾಲೂಕು ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ಕಣ್ಗಾವಲು ಸಮಿತಿ ಇದ್ದು, ಇದನ್ನು ಗ್ರಾಮ ಮಟ್ಟದಲ್ಲಿಯೂ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ಹಂತದಲ್ಲಿ ಶಿಕ್ಷಕರು, ಪಿ.ಡಿ.ಓ, ಸಿ.ಡಿ.ಪಿ.ಓ, ಪೊಲೀಸ್ ಸೇರಿದಂತೆ ವಿವಿಧ ಅಧಿಕಾರಿಗಳನ್ನೊಳಗೊಂಡ ಮಹಿಳೆಯರ ಮತ್ತು ಮಕ್ಕಳ ಕಣ್ಗಾವಲು ಸಮಿತಿ ರಚನೆಗೆ ಆಯೋಗ ಮುಂದಾಗಿದೆ ಎಂದು ನಾಗಣಗೌಡ ಕೆ. ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ ಇದ್ದರು.