ಸೇಡಂ | ಮಲ್ಕಾಪಲ್ಲಿ ಗ್ರಾಮದಲ್ಲಿ ಸರಕಾರಿ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ: ಸೇಡಂ ತಾಲೂಕಿನ ಮಲ್ಕಾಪಲ್ಲಿ ಗ್ರಾಮದಲ್ಲಿ 3.11 ಕೋಟಿ ರೂಪಾಯಿ ಅನುದಾನದಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಲಾಗಿರುವ 8 ಕೋಣೆಗಳು, ಕಾಂಪೌಂಡ್, ಶೌಚಾಲಯ ಕಟ್ಟಡವನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಕೆಕೆಆರ್‌ಡಿಬಿಯ ಅಕ್ಷರ ಆವಿಷ್ಕಾರ ಯೋಜನೆ ಮೂಲಕ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಮತ್ತು ಸರ್ಕಾರಿ ಶಾಲೆಗಳನ್ನು ಅತ್ಯುತ್ತಮ ಶಾಲೆಗಳನ್ನಾಗಿಸಲು ಎಲ್ಲಾ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಎಐಸಿಸಿ ಅಧ್ಯಕ್ಷರು ಮತ್ತು ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದ ಫಲವಾದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಈ ಭಾಗದ ಅನೇಕ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದೊರಕುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲ್ಕಾಪಲ್ಲಿ ಗ್ರಾಮದ ಮುಖಂಡರು, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.