ಕಲಬುರಗಿ: ಚಿತ್ತಾಪುರ, ನಾಲವಾರ ಕೃಷಿ ಯಂತ್ರಧಾರ ಕೇಂದ್ರ ಲೊಕಾರ್ಪಣೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಚಿತ್ತಾಪುರ ತಾಲೂಕಿನ ಚಿತ್ತಾಪುರ ಮತ್ತು ನಾಲವಾರ ಕೃಷಿ ಯಂತ್ರಧಾರ ಕೇಂದ್ರ ಮತ್ತು ನಾಲವಾರ ಡ್ರೋನ್ ಸಿಂಪರಣಾ ಯಂತ್ರಗಳ ಸೇವಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು.
2022-23ನೇ ಸಾಲಿನ ಕೆ.ಕೆ.ಅರ್.ಡಿ.ಬಿ ಅನುದಾನದ ಮೆಗಾ-ಮ್ಯಾಕ್ರೋ ಯೋಜನೆಯಡಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಕೃಷಿ ಯಂತ್ರಧಾರ ಕೇಂದ್ರದಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಿ ಬೇಕಾಗಿರುವ ಟ್ರಾಕ್ಟರ್, ರೋಟೋವೇಟರ್ಸ್, ಭೂಮ್ ಸ್ಪ್ರೇಯರ್, ರಾಶಿ ಯಂತ್ರ, ನೇಗಿಲು ಕಲ್ಟಿವೇಟರ್ಸ್, ಬಿತ್ತನೆ ದಿಂಡು ಹಾಗೂ 50 ಲಕ್ಷ ರೂ. ವೆಚ್ಚದ ನಾಲವಾರ ಡ್ರೋನ್ ಸಿಂಪರಣಾ ಕೇಂದ್ರದಲ್ಲಿ ಕೀಟನಾಶಕ ಔಷಧ ಸಿಂಪಡಿಸಲು ಡ್ರೋನ್ ಗಳು ರೈತರಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ.
ಇದಲ್ಲದೆ 30 ಲಕ್ಷ ರೂ. ವೆಚ್ಚದಲ್ಲಿ ಪಶುಪಾಲನಾ ಭವನ, 40 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆಯನ್ನು ಪಾಲಿಕ್ಲಿನಿಕ್ ಗಳನ್ನಾಗಿ ಮೇಲ್ದರ್ಜೆಗೇರಿಸುವ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಿದರು. ಇದಲ್ಲದೆ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಆರೊಗ್ಯ ಚಿಕಿತ್ಸೆ ನೀಡುವ ಸಂಚಾರಿ ಅರೋಗ್ಯ ಕ್ಲಿನಿಕ್ ವಾಹನಕ್ಕೆ ಸಚಿವರು ಚಾಲನೆ ನೀಡಿದರು.
ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ:
ಇದೇ ಸಂದರ್ಭದಲ್ಲಿ 2020-21ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿದಿಯಡಿ ಚಿತ್ತಾಪುರ ಪಟ್ಟಣದಲ್ಲಿ ಸುಮಾರು 6.25 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಐ.ಡಿ.ಎಲ್ ನಿಂದ ಅಭಿವೃದ್ಧಿಪಡಿಸಲಾದ ಫುಟ್ಬಾಲ್ ಕ್ರೀಡಾಂಗಣ, ಕ್ರಿಕೆಟ್ ಮೈದಾನ, ಬಾಕ್ಸ್ ಕ್ರಿಕೆಟ್, ನೆಟ್ ಕ್ರಿಕೇಟ್, ವಾಲಿಬಾಲ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟ್, ಕಬ್ಬಡಿ ಮೈದಾನವನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಅರ್ಪಿಸಿದರು.
ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಚಿತ್ತಾಪುರ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಕೃಷಿ ಉಪನಿರ್ದೇಶಕಿ ಅನುಸುಯಾ ಹೂಗಾರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಠಗಿ, ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತ ಸೌರಭ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.