ಕಲಬುರಗಿ| ಚಂದ್ರಶೇಖರ ಶಿಲ್ಪಿಗೆ ರಾಷ್ಟ್ರೀಯ ಕರಕುಶಲ ಪ್ರಶಸ್ತಿ
ಕಲಬುರಗಿ: ಇಲ್ಲಿಯ ಖ್ಯಾತ ಕಲಾವಿದ, ಸಾಂಪ್ರದಾಯಿಕ ಕುಸುರಿ ಕೆತ್ತನೆಯಲ್ಲಿ ಹೆಸರು ಮಾಡಿರುವ ಚಂದ್ರಶೇಖರ ವೈ. ಶಿಲ್ಪಿ ಅವರಿಗೆ ಭಾರತ ಸರ್ಕಾರದ ಜವಳಿ ಸಚಿವಾಲಯ ನೀಡುವ 2024ನೇ ರಾಷ್ಟ್ರೀಯ ಕರಕುಶಲ ಪ್ರಶಸ್ತಿ ದೊರೆತಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶಿಲ್ಪಿ ಅವರು ಕೆತ್ತನೆ ಮಾಡಿರುವ ಅಪರೂಪದ ಕಲಾ ನೈಪುಣ್ಯತೆ ಹೊಂದಿರುವ ದ್ವಾರಬಾಗಿಲಿಗೆ ಕರಕುಶಲ ಪ್ರಶಸ್ತಿ ದೊರೆತಿದ್ದು, ಡಿಸೆಂಬರ್ 9ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು 2 ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಹೊಂದಿದೆ. ವಾಸ್ತು ಪ್ರಕಾರದ ಪೂಜಾ ದ್ವಾರಬಾಗಿಲು ಶಾಸ್ತ್ರೋಕ್ತ ಶಿಲ್ಪ ಶಾಸ್ತ್ರ ಅಧ್ಯಯನದ ಮಾಡಿ ಅವರದೇ ಹೊಸತಾದ ಪರಿಕಲ್ಪನೆಯಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆ ಮಾಡಿದ್ದಕ್ಕೆ ಈ ಪ್ರಶಸ್ತಿ ದೊರಕಿದೆ. ಒಟ್ಟಾರೆ ದೇಶದಾದ್ಯಂತ ಬಂದಿದ್ದ 780 ಕಲಾಕೃತಿಗಳಲ್ಲಿ ಚಂದ್ರಶೇಖರ್ ಶಿಲ್ಪಿ ಅವರ ದ್ವಾರಬಾಗಿಲಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.
ಕಳೆದ ನಾಲ್ಕು ದಶಕಗಳಿಂದ ಶಿಲ್ಪಕಲೆ, ದ್ವಾರ ಬಾಗಿಲಿನ ಕೆತ್ತನೆಯಲ್ಲಿ ತೊಡಗಿಸಿಕೊಂಡಿರುವ ಚಂದ್ರಶೇಖರ ಶಿಲ್ಪಿ ಅವರು ಮೂಲತಃ ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಗೋನಾಲ ಗ್ರಾಮದ ಕಲಾವಿದ ನಾಗಣ್ಣ ಬಡಿಗೇರ ಅವರಿಂದ ದ್ವಾರ ಬಾಗಿಲು, ಪೂಜಾ ಬಾಗಿಲು ಕೆತ್ತನೆ ಹಾಗೂ ಶಿಲ್ಪಕಲೆಯನ್ನು ಕಲಿತ ಚಂದ್ರಶೇಖರ ಶಿಲ್ಪಿ ಅವರು ಕಲ್ಯಾಣ ಕರ್ನಾಟಕದ ಯಾದಗಿರಿ, ಕಲಬುರಗಿ ಭಾಗದಲ್ಲಿ ಪ್ರಸಿದ್ಧಿಯಾದ ಸಗರನಾಡು ಕಲಾ ಶೈಲಿಗೆ ಸಾಂಪ್ರದಾಯಿಕ ಶೈಲಿಯನ್ನು ಸಂಯೋಜಿಸಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಶಿಲ್ಪಿ ಅವರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ, ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.