ಕಲಬುರಗಿ | ಸೇಡಂ ಪಟ್ಟಣದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ಕೊಡಿ, ಪ್ರವಾಹ ನಿಯಂತ್ರಣಕ್ಕೆ ಸಿದ್ಧರಾಗಿ: ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಸೇಡಂ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಪಟ್ಟಣದೆಲ್ಲೆಡೆ ನೈರ್ಮಲ್ಯ, ಶುಚಿತ್ವ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಹೇಳಿದರು.
ಸೇಡಂ ಪ್ರವಾಸ ಕೈಗೊಂಡಿದ್ದ ಅವರು, ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸೇಡಂ ತಾಲೂಕಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಎಲ್ಲೆಂದರಲ್ಲೆ ಕಸ ಹಾಕಲು ಅವಕಾಶ ನೀಡಬಾರದು. ಕಸ ಸಂಗ್ರಹಣೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಅವರಿಗೆ ನಿರ್ದೇಶನ ನೀಡಿದ ಅವರು, ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಸೇಡಂ ತಾಲೂಕಿನಲ್ಲಿ ಲೋಕೋಪಯೋಗಿ, ಪಿ.ಆರ್.ಇ.ಡಿ ನಿಂದ ನಡೆಯುತ್ತಿರುವ ಸಿವಿಲ್ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡ ಡಿ.ಸಿ. ಅವರು ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕೆಂದರು. ಸಂಭಾವ್ಯ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಈಗಿನಿಂದಲೆ ಅಧಿಕಾರಿಗಳು ಸನ್ನಧರಾಗಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕು. ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಬೇಕೆಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಅಭಿಲೇಖಾಲಯಕ್ಕೆ ಭೇಟಿ ನೀಡಿದ ಡಿ.ಸಿ. ಅವರು ಭೂ-ಸುರಕ್ಷೆ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ತಿಳಿದುಕೊಂಡು, ಮುಂದಿನ ದಿನದಲ್ಲಿ ಸಾರ್ವಜನಿಕರಿಗೆ ಭೌತಿಕ ಬದಲು ಡಿಜಿಟಲ್ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕು ಮುನ್ನ ಮಳಖೇಡ್ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಕೆ.ಆರ್.ಡಿ.ಸಿ.ಎಲ್ ನಿಂದ ನಡೆಯುತ್ತಿರುವ ವಿದ್ಯುತ್ ದೀಪ್ ಅಳವಡಿಕೆ ಕಾಮಗಾರಿ ವೀಕ್ಷಣೆಯಿಂದ ತಾಲೂಕಾ ಪ್ರವಾಸ ಆರಂಭಿಸಿದ ಜಿಲ್ಲಾಧಿಕಾರಿಗಳು, ನೀಲಹಳ್ಳಿ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ ಕಚೇರಿ ಮತ್ತು ಅರಿವು ಕೇಂದ್ರಕ್ಕೆ ಭೇಟಿ ನೀಡಿದರು.
ನಂತರ ಸೇಡಂ ತಾಲೂಕಿನ ಬಿಬ್ಬಳ್ಳಿ ಕಸ್ತುರಬಾ ಶಾಲೆಯಲ್ಲಿ ಪಿ.ಆರ್.ಇ.ಡಿ.ಯಿಂದ ನಡೆಯುತ್ತಿರುವ ದುರಸ್ತಿ ಕಾಮಗಾರಿ ವೀಕ್ಷಣೆ ಮಾಡಿದರು. ಇದೇ ಗ್ರಾಮದಲ್ಲಿನ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿದ ಡಿ.ಸಿ. ಅವರು ಅಲ್ಲಿ "ಸ್ಪೂರ್ತಿ ಕಿರಣ" ಕಾರ್ಯಕ್ರಮದ ಅಂಗವಾಗಿ ಮಕ್ಕಳೊಂದಿಗೆ ಸಂವಾದ ನಡೆಸಿ ಯಶಸ್ವಿ ಜೀವನದ ಸೂತ್ರಗಳನ್ನು ಹಂಚಿಕೊಂಡರು. ಕೆ.ಪಿ.ಎಸ್.ಸಿ ಮತ್ತು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ಶಾಲಾ ಹಂತದಿಂದಲೆ ಸಿದ್ಧತೆ ಆರಂಭಿಸಬೇಕೆಂದು ಮಕ್ಕಳಿಗೆ ಕರೆ ನೀಡಿದರು. ಮಕ್ಕಳೊಂದಿಗೆ ಸೆಲ್ಫಿ ತೆಗೆಸಿಕೊಂಡು ಅವರ ಖುಷಿಗೆ ಕಾರಣರಾದರು. ತಾಲೂಕಾ ಪಂಚಾಯತ್ ಇ.ಓ ಚೆನ್ನಪ್ಪ ರಾಯಣ್ಣನವರ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ ಸಾತ್ ನೀಡಿದರು.
ನಂತರ ಸೇಡಂ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಟಪನಹಳ್ಳಿ ಜಾಕ್ ವೆಲ್ ಗೆ ಭೇಟಿ ಕೊಟ್ಟು ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸೇಡಂ ಪಟ್ಟಣದ ಶಾಸ್ತ್ರಿ ನಗರದಲ್ಲಿ ಪುರಸಭೆಯಿಂದ ನಡೆಯುತ್ತಿರುವ ಸಿ.ಸಿ ರಸ್ತೆ, ಗಾಂಧಿ ನಗರದ ಉದ್ಯಾನವನದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಸಿ ನೆಡೆಯುವ ಕಾಮಗಾರಿ ಪರಿಶೀಲಿಸಿದಲ್ಲದೆ ಪಟ್ಟಣದಲ್ಲಿ ಮಾದರಿ ಉದ್ಯಾನವನ ನಿರ್ಮಿಸುವಂತೆ ಪುರಸಭೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿರಾ ಕ್ಯಾಂಟೀನಲ್ಲಿ ಉಪಹಾರ ಸವಿದ ಡಿ.ಸಿ:
ತಾಲೂಕು ಪ್ರವಾಸದ ಅಂಗವಾಗಿ ಸೇಡಂ ಪಟ್ಟಣದಲ್ಲಿ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನಿಡಿದ ಜಿಲ್ಲಾಧಿಕಾರಿಗಳು ಅಲ್ಲಿ ಉಪಹಾರ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ರುಚಿಯಾದ ತಿಂಡಿ ಬಡಿಸುವುದರ ಜೊತೆಗೆ ಅಡುಗೆ ಕೋಣೆ ಸೇರಿದಂತೆ ಕ್ಯಾಂಟೀನ್‌ನ ಆವರಣದಲ್ಲಿ ಎಲ್ಲೆಡೆ ಸ್ವಚ್ಛತೆ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ, ತಹಶೀಲ್ದಾರ ಶ್ರೆಯಾಂಕಾ ಧನಶ್ರೀ ಸೇರಿದಂತೆ ಇತರೆ ತಾಲೂಕಾ ಮಟ್ಟದ ಅಧಿಕಾರಿಗಳಿದ್ದರು.