ಎನ್.ರವಿಕುಮಾರ್ ಅವರದ್ದು ಕೊಳಕು ಮನಸ್ಥಿತಿ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಿಯಾಂಕ್ ಖರ್ಗೆ
ಕಲಬುರಗಿ: ಎಂಎಲ್‌ಸಿ ಎನ್.ರವಿಕುಮಾರ್ ಮೂಲತಃ ಬಿಜೆಪಿಗರಲ್ಲ, ಅವರು ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರಾಗಿದ್ದು, ಅವರದ್ದು ಕೊಳಕು ಬುದ್ದಿ, ಕೊಳಕು ಮನಸ್ಸು ಹಾಗೂ ಕೊಳಕು ನಾಲಿಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಎಂಎಲ್‌ಸಿ ರವಿಕುಮಾರ್ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರವಿಕುಮಾರ್ ಆರೆಸ್ಸೆಸ್ ಶಾಖೆಯಿಂದ ಬಂದವರು, ಆರೆಸ್ಸೆಸ್ ನಲ್ಲಿ ಮನುಸ್ಮೃತಿಯ ಮನಸ್ಥಿತಿ ಇದೆ. ಎನ್.ರವಿಕುಮಾರ್ ಮೊದಲಿನಿಂದಲೂ ಬಾಯಿಗೆ ಬಂದಂತೆ ಮಾತಾಡುತ್ತಾ ಬಂದಿದ್ದಾರೆ. ಕಲಬುರಗಿ ಡಿಸಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ಕೋರ್ಟ್ ಅವರಿಗೆ ಛೀಮಾರಿ ಹಾಕಿತ್ತು ಎಂದು ಹೇಳಿದರು.
ಮನುಸ್ಮೃತಿಯಲ್ಲಿ ಮಹಿಳೆಯರನ್ನು ಯಾವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆರೆಸ್ಸೆಸ್ ಅವರ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ತಮ್ಮ ಮನೆಯಲ್ಲಿ ಜಾರಿಗೆ ತರಲಿ ಎಂದು ಹೇಳಿದರು.
ನಾನು ಆರೆಸ್ಸೆಸ್ ನಿಷೇಧ ಮಾಡುತ್ತೇನೆ ಎಂದು ಹೇಳಲಿಲ್ಲ. ಮೂರು ಬಾರಿ ಆರೆಸ್ಸೆಸ್ ಅನ್ನು ನಿಷೇಧಿಸಲಾಗಿತ್ತು. ನಿಷೇಧವನ್ನು ಹಿಂತೆಗೆದು ತಪ್ಪು ಮಾಡಿದ್ದೇವೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಆರೆಸ್ಸೆಸ್ ನಿಷೇಧ ಮಾಡಲು 10 ಕಾರಣ ಕೊಡಿ ಎನ್ನುವ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ನವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ ಎಂದು ಹೇಳಿದರು.
ಅಶ್ಲೀಲವಾಗಿ ಮಾತನಾಡಿದರೆ ನೇಣು ಹಾಕಿಕೊಳ್ಳುತ್ತೇನೆ ಎಂಬ ರವಿಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಿದ್ರೆ ರವಿಕುಮಾರ್ ಅವರಿಗೆ ಹಗ್ಗ ಕೊಡಿ ಎಂದು ಲೇವಡಿ ಮಾಡಿದ ಸಚಿವರು, ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಬೇರೆ ಮಾಡಿಕೊಳ್ಳುವ ರವಿಕುಮಾರ್ ಗೆ ನಾಚಿಕೆ ಆಗಬೇಕು, ವಿಡಿಯೋದಲ್ಲೇ ಎಲ್ಲಾ ಇದೆ, ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.
ಆರೆಸೆಸ್ಸ್ ಒಂದು ದೇಶ ವಿರೋಧಿ ಸಂಘಟನೆ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಪ್ರಸ್ತುತ ವಿಷಯದಲ್ಲಿ ಯಾರು ಕೋಮು ವಿಷ ಬೀಜ ಬಿತ್ತುತ್ತಿದ್ದಾರೆ? ಯಾರು ʼಒಂದು ಧರ್ಮ, ಒಂದು ದೇಶʼ ಎನ್ನುತ್ತಿದ್ದಾರೆ. ಇಂತವರನ್ನು ಅಂಬೇಡ್ಕರ್ ಅವರು ದೇಶದ್ರೋಹಿಗಳು ಎಂದಿದ್ದಾರೆ ಎಂದು ಹೇಳಿದರು.