ಕಲಬುರಗಿಯನ್ನು ಪ್ರಮುಖ ಪ್ರಾದೇಶಿಕ ವಾಯುಯಾನ ಕೇಂದ್ರವಾಗಿಸುವುದೇ ನಮ್ಮ ಗುರಿ: ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಕಲಬುರಗಿ: ಬೆಂಗಳೂರು, ಕಲಬುರಗಿ ನಡುವೆ ಇರುವ ದಿನನಿತ್ಯದ ವಿಮಾನ ಸೇವೆಯು ವಿಸ್ತಾರಗೊಂಡಿದ್ದು, ಈಗ ಹೆಚ್ಚು ಆಸನ ಸಾಮರ್ಥ್ಯ ಹೊಂದಿದ ದೊಡ್ಡ ವಿಮಾನವು ಸಂಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಪ್ರಮುಖ ಪ್ರಾದೇಶಿಕ ವಾಯುಯಾನ ಕೇಂದ್ರವಾಗಿಸುವುದು ನಮ್ಮ ಗುರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಸೌಕರ್ಯಗಳು ಸುಧಾರಣೆಯಾಗಿವೆ, ವಿಮಾನ ನಿಲ್ದಾವನ್ನು ಮೇಲ್ದರ್ಜೆಗೇರಿಸಲು ಮತ್ತು ಇತರ ಪ್ರಮುಖ ನಗರಗಳಿಗೆ ಸೇವೆಗಳನ್ನು ವಿಸ್ತರಿಸಲು ರೂಪುರೇಷೆಗಳು ಸಿದ್ದಗೊಳ್ಳುತ್ತಿವೆ, ಈ ವಿಮಾನ ಸೇವೆಯ ಅಭಿವೃದ್ಧಿಯು ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಕಲಬುರಗಿಯ ಪಾತ್ರವನ್ನು ಬಲಪಡಿಸುತ್ತದೆ ಎನ್ನುವುದು ನನ್ನ ನಂಬಿಕೆಯಾಗಿದೆ ಎಂದಿದ್ದಾರೆ.
ಏಪ್ರಿಲ್ ನಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಕರ್ನಾಟಕದ ಇತರೆ ಭಾಗಗಳಿಗೆ ಸೇವೆಗಳನ್ನು ವಿಸ್ತರಿಸಲು ಪ್ರಮುಖ ವಿಮಾನಯಾನ ನಿರ್ವಾಹಕರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ, ಸಂಸ್ಥೆಗಳಿಂದ ಸಕಾರಾತ್ಮಕ ಸ್ಪಂದನೆ ಮತ್ತು ಆಸಕ್ತಿ ವ್ಯಕ್ತವಾಗುತ್ತಿರುವುದು ಕಲಬುರಗಿಯ ಬೆಳವಣಿಗೆಯ ದ್ಯೋತಕ ಎಂದು ಭಾವಿಸಿದ್ದಾಗಿ ತಿಳಿಸಿದ್ದಾರೆ.
ಅಲ್ಲದೆ, ಕಲಬುರಗಿಯ ವಿಮಾನಗಳು ಶೇ.95ರಷ್ಟು ಸೀಟುಗಳು ಭರ್ತಿಯಾಗುತ್ತಿರುವುದು ಜಿಲ್ಲೆಯ ವ್ಯಾಪಾರ, ಕೈಗಾರಿಕೆಗಳ ಅಭಿವೃದ್ಧಿ ಮತ್ತು ನಾಗರಿಕ ಬೇಡಿಕೆಗಳ ಸ್ಪಷ್ಟ ಸಂಕೇತವಾಗಿದೆ ಎಂದೂ ಅವರು ತಿಳಿಸಿದ್ದಾರೆ.